ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಎಸ್‌ ಬಿ ಐ , ಆರ್‌ಬಿಒ ಉಡುಪಿಯಲ್ಲಿ ಸಂಭ್ರಮದ ಸ್ಟೇಟ್ ಬ್ಯಾಂಕ್ ದಿನಾಚರಣೆ

ಉಡುಪಿ : ಭಾರತೀಯ ಸ್ಟೇಟ್ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿ (ಆರ್‌ಬಿಒ)ಯಲ್ಲಿ ಇಂದು ಸ್ಟೇಟ್ ಬ್ಯಾಂಕ್ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಾರತದ ಅತಿ ದೊಡ್ಡ ಬ್ಯಾಂಕ್‌ನ 200+ ವರ್ಷಗಳ ಪರಂಪರೆಯನ್ನು ಸ್ಮರಿಸಲಾಯಿತು.ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಬಿ ಪ್ರಕಾಶ್ ಅಡಿಗ ಅವರು ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಹಾಗೂ ಉಡುಪಿ ಜಿಲ್ಲೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ವ್ಯವಸ್ಥಾಪಕರಾದ ಅನಿಲ್ ಕುಮಾರ್, ಅಬಲಾಲ್ ದಾಸ್, ಅಕ್ಷಯ್ ಭಾಗವತ್ , ಗೋವಿಂದ ಜೇನಾ ,ಜಗದೀಶ್ ಕಾಮತ್, ಉಡುಪಿ ಶಾಖೆಯ ವಿನೋದ್ ಕುಮಾರ್ ಸಿಂಗ್, ಬ್ಯಾಂಕಿನ ನಿವೃತ್ತ ಹಿರಿಯ ಅಧಿಕಾರಿಗಳಾದ ಮಧುಸೂದನ ಭಟ್, ಸುಕುಮಾರ್, ವಿಟ್ಟಲ್ ಶೆಟ್ಟಿಗಾರ್,ರಾಘವೇಂದ್ರ ಆಚಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರು ಹಾಗೂ ಉಡುಪಿಯ ಪ್ರಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಆದ ಶ್ರೀ ಅಮ್ಮುಂಜೆ ವೆಂಕಟೇಶ ನಾಯಕ್ ಮತ್ತು ಪ್ರಖ್ಯಾತ ವೈದ್ಯರಾದ ಗಾಂಧಿ ಆಸ್ಪತ್ರೆಯ ಡಾ. ವ್ಯಾಸರಾಜ ತಂತ್ರಿ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ಅಡಿಗ ಅವರು 1806ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾ ಆಗಿ ಆರಂಭವಾಗಿ 1955ರಲ್ಲಿ ಎಸ್‌ಬಿಐ ಆದ ನಮ್ಮ ಬ್ಯಾಂಕ್ ಪ್ರತಿಯೊಬ್ಬ ಭಾರತೀಯನ ಬ್ಯಾಂಕರ್ ಆಗಿದೆ. ಉಡುಪಿಯಲ್ಲಿ ನಮ್ಮ33 + ಶಾಖೆಗಳು ರೈತರು, ಮೀನುಗಾರರು, ಎಂಎಸ್‌ಎಂಇಗಳು, ವಿದ್ಯಾರ್ಥಿಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು ಸೇರಿದಂತೆ 10ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ.

ಸ್ಟೇಟ್ ಬ್ಯಾಂಕ್ ದಿನದಂದು ಸೇವೆ, ಪಾರದರ್ಶಕತೆ, ನೈತಿಕತೆ, ಸೌಜನ್ಯ ಮತ್ತು ಸುಸ್ಥಿರತೆ ಎಂಬ ಎಸ್‌ಬಿಐ ಮೌಲ್ಯಗಳಿಗೆ ನಾವು ಪುನಃ ಬದ್ಧರಾಗೋಣ” ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಿಬ್ಬಂದಿಗಳಿಗೆ ಗೌರವ, ಗ್ರಾಹಕ ಸೇವಾ ಶ್ರೇಷ್ಠತೆಯ ಪ್ರತಿಜ್ಞೆ, ಹಾಗೂ ಕೇಕ್ ಕತ್ತರಿಸುವ ಸಮಾರಂಭ ನಡೆಯಿತು. ಉಡುಪಿ ಪ್ರಾದೇಶಿಕ ವ್ಯವಹಾರ ಕಚೇರಿಯ ಮುಖ್ಯ ವ್ಯವಸ್ಥಾಪಕ ಕೀಳಂಜೆ ಶ್ರೀಕೃಷ್ಣರಾಜ ಭಟ್ ಅವರು ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಮನಿಷಾ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *