ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಾ. ಕೋಟ ಶಿವರಾಮ ಕಾರಂತ ಜನ್ಮದಿನೋತ್ಸವ – ರಾಜ್ಯ ಮಟ್ಟದ ಚಲನ ಚಿತ್ರೋತ್ಸವಕ್ಕೆ ಚಾಲನೆ

ಕೋಟ ಸಾಹಿತ್ಯ, ಯಕ್ಷಗಾನ, ಸಿನಿಮಾ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಅಚ್ಚಳಿಯದ ಛಾಪು ಮೂಡಿಸಿದ ಡಾ. ಶಿವರಾಮ ಕಾರಂತರ ಸ್ಮರಣೆಯಲ್ಲಿ ಚಲನ ಚಿತ್ರೋತ್ಸವ ನಡೆಸುತ್ತಿರುವುದು ಶ್ಲಾಘನೀಯ. ಯುವ ಕಲಾವಿದರಿಗೆ ಇದೊಂದು ಅಭಿವ್ಯಕ್ತಿಯ ವೇದಿಕೆಯೂ ಹೌದು. ಈ ಮೂಲಕ ಕಾರಂತರ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವ ಜನರು ಸಮಾಜಕ್ಕೆ ಗಣನೀಯ ಕೊಡುಗೆಗಳನ್ನು ನೀಡುವಂತಾಗಲಿ – ಎಂದು ಕೋಟದ ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಷ್ಟಿ ಸುಬ್ರಾಯ ಆಚಾರ್ಯ ಮಣೂರು ಹೇಳಿದರು.

ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಮತ್ತು ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನಗಳ ಜಂಟಿ ಆಶ್ರಯದಲ್ಲಿ, ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದಂಗವಾಗಿ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುವ “ಇಂಪನ 2023” ರಾಜ್ಯ ಮಟ್ಟದ ಚಲನ ಚಿತ್ರೋತ್ಸವ, ಕಾರಂತ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ದೀವಿಕಾ ಗಾಯನ ನಮನ, ಚರಿತ್ರಾ ನೃತ್ಯ ನಮನ ಮತ್ತು ಅನಘ ಉರಾಳ ಗಾಯನ ನಮನದ ಮೂಲಕ ಕಾರಂತ ದರ್ಶನ ಮಾಡಿಕೊಟ್ಟರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಿದ್ಯಾರ್ಥಿಗಳನ್ನು ಮತ್ತು ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪರನ್ನು ಸನ್ಮಾನಿಸಿದರು.

ಕುಂಭಾಶಿ ಗ್ರಾಮ ಪಂಚಾಯತ್ ಪಿ ಡಿ ಓ ಜಯರಾಮ ಶೆಟ್ಟಿ, ಕೋಟ ಶಾಲಾ ಮುಖ್ಯೋಪಾಧ್ಯಾ ಯಿನಿ ಪುಷ್ಪಾವತಿ ವೇದಿಕೆಯಲ್ಲಿದ್ದರು. ‘ಮೋಡರ್ನ್ ಮಹಾಭಾರತ’ ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪ ಸಂವಾದ ನಡೆಸಿ ಚಲನಚಿತ್ರದ ಪರಿಚಯ ಮಾಡಿದರು.
ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಸ್ವಾಗತಿಸಿದರು. ಮೋಡರ್ನ್ ಮಹಾಭಾರತ ಚಿತ್ರ ತಂಡದವರು, ಪಂಚಾಯತ್ ಸದಸ್ಯ ರಾಬರ್ಟ್ ರೋಡ್ರಿಗಸ್, ರೋಟರಿ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಡಾ. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಗ್ರಾಮ ಪಂಚಾಯತ್ ಸದಸ್ಯ ವಾಸು ಪೂಜಾರಿ ವಂದಿಸಿದರು. ಚಲನ ಚಿತ್ರೋತ್ಸವದ ಮೊದಲ ದಿನ, ಕೋಟೇಶ್ವರ ಶ್ರೀಧರ ಉಡುಪ ನಿರ್ದೇಶಿಸಿದ, ಎಸ್. ವಿ. ಫಿಲಂ ಪ್ರೊಡಕ್ಷನ್ಸ್ ನ “ಮೋಡರ್ನ್ ಮಹಾಭಾರತ” ಕನ್ನಡ ಚಲನಚಿತ್ರ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *