ಕಟಪಾಡಿ, ಜು. 23: ಶ್ರೀ ಕ್ಷೇತ್ರ ಶಂಕರಪುರದಲ್ಲಿ ತುಳುನಾಡಿನ ಆಟಿ ತಿಂಗಳ ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ‘ಆಟಿದ ವನಸ್ ಗುರೂಜಿನೊಟ್ಟುಗ್’ ಕಾರ್ಯಕ್ರಮದಡಿ ಆಟಿ ತಿಂಗಳ ವಿಶೇಷ ಭೋಜನವನ್ನು ಗುರುವಾರ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಾಯಿ ಈಶ್ವರ್ ಗುರೂಜಿ, ಪೂರ್ವಜರ ಕಾಲದಲ್ಲಿ ಆಟಿ ತಿಂಗಳು ಭಾರೀ ಮಳೆ, ಕಠಿಣ ವಾತಾವರಣ ಮತ್ತು ಆಹಾರದ ಕೊರತೆಯಿಂದ ಸಂಕಷ್ಟದ ಕಾಲವಾಗಿತ್ತು. ಆ ಸಮಯದಲ್ಲಿ ಸೊಪ್ಪು, ತರಕಾರಿ, ಗೆಡ್ಡೆ-ಗೆಣಸು ಮೊದಲಾದ ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿತ್ತು ಎಂದು ತಿಳಿಸಿದರು.ಇಂದಿನ ದಿನಗಳಲ್ಲಿ ಜೀವನಶೈಲಿ ಬದಲಾಗಿದ್ದರೂ, ಹಿರಿಯರು ಅನುಭವಿಸಿದ ಕಷ್ಟಗಳನ್ನು ಸ್ಮರಿಸಿ, ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಆಟಿ ತಿಂಗಳ ಆಚರಣೆಯನ್ನು ದೇವಾಲಯಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ವಿಜೃಂಭಣೆಯಿಂದ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಳೆದ ಐದು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಸಾರ್ವಜನಿಕರಿಗಾಗಿ ಆರೋಗ್ಯಕ್ಕೆ ಪೂರಕವಾದ 30ಕ್ಕೂ ಅಧಿಕ ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳನ್ನು ಸಿದ್ಧಪಡಿಸಿ, ಭಕ್ತರೊಂದಿಗೆ ಹಂಚಿಕೊಳ್ಳುವ ಮೂಲಕ ಈ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಸದಸ್ಯ ವಿಜಯ್ ಕೊಡವೂರು, ಗಜೇಂದ್ರ, ನಾಗರಾಜ್ ಬೈಂದೂರು, ಕ್ಷೇತ್ರಾಡಳಿತ ಮಂಡಳಿಯ ಗೀತಾಂಜಲಿ ಎಂ. ಸುವರ್ಣ, ಸತೀಶ್ ದೇವಾಡಿಗ, ವಿಜಯ ಕುಂದರ್, ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಎಸ್. ಶೆಟ್ಟಿ ಹಾಗೂ ವಿಘ್ನೇಶ್ ನೀಲಾವರ ಉಪಸ್ಥಿತರಿದ್ದರು.ಬಳಿಕ ಸುಮಾರು 500ಕ್ಕೂ ಅಧಿಕ ಭಕ್ತರು ಗುರೂಜಿಯವರೊಂದಿಗೆ ಆಟಿ ತಿಂಗಳ ವಿಶೇಷ ಭೋಜನ ಸವಿದು ಕಾರ್ಯಕ್ರಮದ ಸಾಂಸ್ಕೃತಿಕ ಸೊಬಗನ್ನು ಅನುಭವಿಸಿದರು.











Leave a Reply