ಉಡುಪಿ, ಜು. 11: ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಮೂವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ನಗರಸಭೆಯ ಪ್ರಭಾರ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೀಶ್ (34) ಅವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳಾದ ಯೋಗೀಶ್ ಪ್ರಭು, ವಿನಯ್ ಕುಮಾರ್ ಹಾಗೂ ಸ್ಮಿತಾ ಬಿ. ಬಂಗೇರಾ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರಿನ ಪ್ರಕಾರ, ಆರೋಪಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಗರಸಭೆಯಲ್ಲಿ ಕರ್ತವ್ಯ ನಿಯೋಜನೆ ಮಾಡಬೇಕು. ಇಲ್ಲದಿದ್ದರೆ ಸ್ಮಿತಾ ಬಿ. ಬಂಗೇರಾ ಅವರ ಮೂಲಕ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬೆದರಿಕೆಯಿಂದ ಆತಂಕಗೊಂಡ ದೂರುದಾರರು ₹2 ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದು, ಬಳಿಕ ಉಳಿದ ₹8 ಲಕ್ಷವನ್ನು ನೀಡುವಂತೆ ಆರೋಪಿಗಳು ನಿರಂತರವಾಗಿ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಹಣ ನೀಡಲು ನಿರಾಕರಿಸಿದ ನಂತರ, 2026ರ ಜನವರಿ 29ರಂದು ಸ್ಮಿತಾ ಬಿ. ಬಂಗೇರಾ ಅವರ ಹೆಸರಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆ ಪ್ರಕರಣದಲ್ಲಿ ದೂರುದಾರರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಜೂನ್ 30ರಂದು ಆರೋಪಿಗಳು ಮತ್ತೊಮ್ಮೆ ಕರೆ ಮಾಡಿ ಉಳಿದ ₹8 ಲಕ್ಷ ನೀಡುವಂತೆ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಮತ್ತೊಂದು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಜುಲೈ 6ರಂದು ಮಣಿಪಾಲದ ಪೆರಂಪಳ್ಳಿ ವೃತ್ತದ ಬಳಿ ಯೋಗೀಶ್ ಪ್ರಭು ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 91/2026ರಡಿ ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ಕಾಯ್ದೆಯ ಕಲಂ 3(1)(r), 3(1)(s), 3(5) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 308(2), 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.











Leave a Reply