ಕೋಟ: ಗುಂಡ್ಮಿ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೇವಸ್ಥಾನದಲ್ಲಿ ಇದೇ ಎ. 17 ರಿಂದ 19 ರವರೆಗೆ ಸಿರಿಸಿಂಗಾರ ನೇಮೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ಬಿ. ಕೇಶವ ಕುಂದರ್ ತಿಳಿಸಿದರು.
ಮಂಗಳವಾರ ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾರ್ಕೂರು ಸಂಸ್ಥಾನದ ರಾಜರ ಸೈನಿಕರಾಗಿದ್ದ ಬಬ್ಬುಸ್ವಾಮಿ ಜನಾಂಗದವರಿಗೆ ಅಂದಿನ ಕಾಲದಲ್ಲಿ ನೀಡಲಾದ ಈ ಭೂಮಿಯಲ್ಲಿ ಕಳೆದ 5 ಶತಮಾನಗಳಿಂದ ಆರಾಧನೆ ನಡೆಯುತ್ತಿದೆ. ಸುಮಾರು 55 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಈ ಭಾಗದಲ್ಲಿ ಪ್ರಥಮ ಬಾರಿಗೆ ಇಷ್ಟು ಬೃಹತ್ ಮಟ್ಟದಲ್ಲಿ ನೇಮೋತ್ಸವ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ನೇಮೋತ್ಸವ ಸಮಿತಿಯ ಉಪಾಧ್ಯಕ್ಷರಾದ ಪ್ರತಾಪ್ ಶೆಟ್ಟಿ ಸಾಸ್ತಾನ ಇವರು ಮಾತನಾಡಿ ಎ. 17ರ ಸಂಜೆ 4.ಗ ಕೋಟದ ಶ್ರೀ ಹಿರೇ ಮಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ವಿದ್ವಾನ್ ವಿಜಯ ಮಂಜರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ ಧಾರ್ಮಿಕ ಸಭೆ ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಎ. 18ರಂದು ಬೆಳಿಗ್ಗೆ ಗಜಕಂಬ ಪ್ರತಿಷ್ಠೆ, ಕ್ಷೇತ್ರ ಶುದ್ಧಿ ಹೋಮ ಹಾಗೂ ದೈವಗಳ ದರ್ಶನ ಸೇವೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 5.ಗ ದಾನಿಗಳು ನೀಡಿದ ದೈವಗಳ ನೂತನ ಮುಖಬಿಂಬ ಹಾಗೂ ಭಂಡಾರವನ್ನು ಪುರಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ತರಲಾಗುವುದು.
ಶನಿವಾರ ರಾತ್ರಿ 9.30ರಿಂದ ದೈವರಾಜ ಬಬ್ಬುಸ್ವಾಮಿಯ ನೇಮೋತ್ಸವ ಆರಂಭವಾಗಿ ಮರುದಿನ ಬೆಳಿಗ್ಗೆಯವರೆಗೆ ನಡೆಯಲಿದೆ. ಮಧ್ಯರಾತ್ರಿ 12ಕ್ಕೆ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.ಎ. 19ರ ಬೆಳಿಗ್ಗೆ 10ಕ್ಕೆ ಜುಮಾದಿ ಮತ್ತು ಬಂಟ ದೈವಗಳ ನೇಮೋತ್ಸವ, ಮಧ್ಯಾಹ್ನ 2ಕ್ಕೆ ಗುಳಿಗ ದೈವದ ನೇಮೋತ್ಸವ ಹಾಗೂ ಸಂಜೆ 4.ಗ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಸಂಜೆ ಕುರಿತಂಬಿಲ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಪ್ರತಾಪ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಚಂದ್ರ ಕಟ್ಟಿನ ಮನೆ, ಸ್ವಾಗತ ಸಮಿತಿಯ ಸದಸ್ಯರಾದ ಜಗದೀಶ್ ಗಂಗೊಳ್ಳಿ, ರಾಜೇಶ್ ಆಚಾರ್ಯ ಕೂರಾಡಿ, ಅಕ್ಷಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.













Leave a Reply