ಕೋಟ: ಕರಾವಳಿಯ ಮಣ್ಣಿನಲ್ಲಿ ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕೋಡಿ ಕನ್ಯಾಣದಲ್ಲಿ ಇದೇ ಎ.19 ಭಾನುವಾರದಂದು ಅದ್ಧೂರಿ `ಜನಪದ ಸಿರಿ 2026′ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ್ ಕುಂದರ್ ಹೇಳಿದರು.
ಅವರು ಸೋಮವಾರ ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಂದು ಕಾಲದಲ್ಲಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಜಾನಪದ ಮೇಳಗಳು ಸಕ್ರಿಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆಗಳ ನಿರ್ಲಕ್ಷ್ಯ ಹಾಗೂ ಸರಿಯಾದ ಪ್ರೋತ್ಸಾಹವಿಲ್ಲದೆ ಅರ್ಹ ಕಲಾವಿದರು ವೇದಿಕೆಯಿಂದ ದೂರ ಉಳಿಯುತ್ತಿದ್ದಾರೆ. ಕರಾವಳಿಯ ಯಕ್ಷಗಾನದಷ್ಟೇ ಪ್ರಾಮುಖ್ಯತೆಯನ್ನು ಜಾನಪದ ಕಲೆಗಳಿಗೂ ನೀಡಬೇಕು. ನಮ್ಮ ಹಿರಿಯರು ಉಳಿಸಿಕೊಂಡು ಬಂದ ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು `ಜನಪದ ಸಿರಿ’ ವೇದಿಕೆಯಾಗಲಿದೆ” ಎಂದು ಆಶಯ ವ್ಯಕ್ತಪಡಿಸಿದರು.
ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್ ಮಾತನಾಡಿ ಶ್ರೀ ಬ್ರಾಹ್ಮಿ ಗ್ರೂಪ್ಸ್ ಕೋಡಿ ಕನ್ಯಾಣ, ವಿಶ್ವ ಮಾನವ ಫೌಂಡೇಶನ್ ಹಾಗೂ ತಸ್ಮಯ್ ಪ್ರೊಡಕ್ಷನ್ ಸಹಯೋಗದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.ಎ. 19ರಂದು ಕೋಡಿ ಕನ್ಯಾಣದ ಶ್ರೀ ಮಹಾಸತೀಶ್ವರೀ ದೇವಸ್ಥಾನದ ಹತ್ತಿರ ಸಂಜೆ 6.00 ರಿಂದ 9.30 ರ ವರೆಗೆ 200ಕ್ಕೂ ಅಧಿಕ ಕಲಾವಿದರ ಸಂಗಮದಿಂದ ಕಾರ್ಯಕ್ರಮ ನಡೆಯಲಿದೆ.
ಉಡುಪಿ, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 200ಕ್ಕೂ ಅಧಿಕ ಕಲಾವಿದರು ಇಲ್ಲಿ ಕಲೆ ಪ್ರದರ್ಶಿಸಲಿದ್ದಾರೆ. ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ವೀರಗಾಸೆ, ಲಂಬಾಣಿ ನೃತ್ಯ ಹಾಗೂ ಹುಲಿವೇಷದಂತಹ ವಿಶಿಷ್ಟ ಕಲಾ ಪ್ರಕಾರಗಳು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿವೆ. ಕಡಲ ತೀರದ ಕೋಡಿ ಕನ್ಯಾಣದಲ್ಲಿ ಇಂತಹದೊಂದು ಬೃಹತ್ ರಾಜ್ಯ ಮಟ್ಟದ ಜನಪದ ಉತ್ಸವ ನಡೆಯುತ್ತಿರುವುದು ಇದೇ ಮೊದಲು ಎಂದು ಡಾ.ಕೃಷ್ಣ ಕಾಂಚನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟಕರಾದ ಶಂಕರ್ ಬಂಗೇರ, ಸತೀಶ್ ತಿಂಗಳಾಯ, ವಸಂತ ಪುತ್ರನ್, ರಾಘವೇಂದ್ರ ಕರ್ಕೇರ, ಉದಯ ಸುವರ್ಣ ಹಾಗೂ ಲೋಕೇಶ್ ಮೆಂಡನ್ ಉಪಸ್ಥಿತರಿದ್ದರು.














Leave a Reply