ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ಮಹತ್ವದ ಸ್ಥಾನವಿದೆ.ಅದರಲ್ಲಿ ಮನುಷ್ಯ ಮತ್ತು ನಿಸರ್ಗವು ಜೊತೆ ಸೇರಿ ಆಚರಿಸುವ ಒಂದು ವಿಶೇಷ ಹಬ್ಬವೆಂದರೆ ಅದು ಯುಗಾದಿ. ಪ್ರಕೃತಿಯೊಂದಿಗೇ ಬಾಳು ಎಂಬುದು ಭಾರತೀಯರು ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದ ಸಿದ್ಧಾಂತ. ಇಂಥ ವಿಶೇಷ ಹಬ್ಬಗಳ ಪೌರಾಣಿಕ, ಐತಿಹಾಸಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯ ಸತ್ಯವನ್ನು ಅರಿತುಕೊಂಡು ನಮ್ಮ ಹಿರಿಯರ ಶ್ರದ್ಧೆ ಮತ್ತು ನಂಬಿಕೆಗಳನ್ನು ಮುಂದುವರಿಸುವ ಗುರುತರವಾದ ಜವಾಬ್ದಾರಿ ಆಧುನಿಕ ಯುಗದ ಯುವ ಸಮೂಹದ ಮೇಲಿದೆ ಎಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಕಾಂತ ಭಟ್ ಅವರು ಅಭಿಪ್ರಾಯ ಪಟ್ಟರು.
ಅವರು ದಿನಾಂಕ 10-04-2026 ನೇ ಶುಕ್ರವಾರದಂದು ಸ.ಪ್ರ.ದ ಕಾಲೇಜು, ಹೆಬ್ರಿಯಲ್ಲಿ ನಡೆದ ಯುಗಾದಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳಿ ಕೃಷ್ಣ ಅವರು ಮಾತನಾಡುತ್ತಾ, ಋತುಗಳಿಗೆ ಅನ್ವಯವಾಗಿ ನಡೆಯುವ ಯುಗಾದಿ ಹಬ್ಬವು ಹಲವು ಸಂಗತಿಗಳಿಗೆ ಮುನ್ನುಡಿಯಾಗಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬದಂತಿರುವ ಇಂಥ ಹಬ್ಬಗಳು ವಿಶ್ವಕ್ಕೆ ಭಾರತದ ಬಹುದೊಡ್ಡ ಸಂದೇಶವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗಡೆ ಅವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ಡಾ. ಸುರೇಂದ್ರ ಶೆಟ್ಟಿ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕರಾದ ಡಾ.ಗಣೇಶ್ ಎಸ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಕು.ಸುಷ್ಮಾ ರಾವ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ.ಭೈರವಿ ಪಂಡ್ಯಾ ಉಪಸ್ಥಿತರಿದ್ದರು. ಡಾ.ಭೈರವಿ ಪಂಡ್ಯಾ ಸ್ವಾಗತಿಸಿ, ಡಾ. ಗಣೇಶ್ ಅವರು ವಂದಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿ ರವೀಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.















Leave a Reply