ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರತಿ ಹಳ್ಳಿಗೂ ತಟ್ಟಿದ ಗ್ಯಾಸ್‌ ಸಮಸ್ಯೆ:|| ರಸ್ತೆ ಬದಿಯ ಬಂಡಿ ವ್ಯಾಪಾರಿಗಳ ಗಳಿಕೆಗೆ ಹೊಡೆತ
ಅಡುಗೆ ಮನೆವರೆಗೂ ಬಂತು ಇರಾನ್ ಮೇಲಿನ ಯುದ್ಧದ ಸಂಕಷ್ಟ !

🖋️ ~ಸಚೀನ ಆರ್ ಜಾಧವ

ಸಾವಳಗಿ: ಅಮೆರಿಕ-ಇಸ್ರೇಲ್ ಜತೆಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ, ಜಾಗತಿಕ ಯುದ್ಧ ಭೀತಿಯಿಂದಾಗಿ ದೇಶದಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು, ತಾಲೂಕಿಲ್ಲೂ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ತಗ್ಗಿದೆ. ಇದರಿಂದ ಆತಿಥ್ಯ ವಲಯದ ಉದ್ಯಮಕ್ಕೆ ಸಂಕಷ್ಟ ಬಂದೊದಗಿದೆ.

ಕೆಲ ಹೋಟೆಲ್‌ಗಳವರು ಈಗಾಗಲೇ ಕಟ್ಟಿಗೆಗಳನ್ನು ಸಂಗ್ರಹಿಸಿ, ಒಲೆ ಉರಿಸುವ ಸಿದ್ಧತೆಗಳಲ್ಲಿದ್ದರೆ. ಮತ್ತೆ ಕೆಲವರು ಈಗಾಗಲೆ ಕಟ್ಟಿಗೆ ಒಲೆ ಆರಂಭಿಸಿದ್ದಾರೆ. ಪಾನಿಪುರಿ, ಚೈನೀಸ್ ಬಂಡಿಗಳು, ದೋಸೆ, ಇಡ್ಲಿ ಮಾರಾಟ ಮಾಡುವ ಬಂಡಿಗಳಲ್ಲಿ ವಾಣಿಜ್ಯ ಸಿಲಿಂಡ‌ರ್ ಖಾಲಿಯಾಗಿದ್ದು, ಬಹುತೇಕ ವ್ಯಾಪಾರ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ. ಅಲ್ಲೆಲ್ಲೋ ಯುದ್ಧವಾಗುತ್ತಿದ್ದರೆ, ನಮ್ಮನೆಯ, ಹೋಟೆಲ್ ಒಲೆಗಳು ಪರಿಣಾಮ ಎದುರಿಸುವಂತಾಗಿದೆ.

ಪೂರೈಕೆಯಲ್ಲಿ ವ್ಯತ್ಯಾಸ, ದರ ಹೆಚ್ಚಳ: ದುಬೈ ಸೇರಿ ನಾನಾ ದೇಶಗಳಿಂದ ವಿಮಾನ, ಹಡಗುಗಳಲ್ಲಿ ದೇಶಕ್ಕೆ ಬರುವ ಖರ್ಜೂರ, ಡೈಫೂಟ್ಸ್‌ಗಳ ಪೂರೈಕೆಯಲ್ಲೂ ವ್ಯತ್ಯಾಸ ಆಗುತ್ತಿರುವುದರಿಂದ ಇವುಗಳ ದರದಲ್ಲೂ ಹೆಚ್ಚಾಗಿದೆ. ಜತೆಗೆ, ಸಿಎನ್‌ಜಿ ಪೂರೈಕೆಯಲ್ಲೂ ವ್ಯತ್ಯಾಸ ಆಗುತ್ತಿರುವುದರಿಂದ ಇವುಗಳನ್ನೇ ನೆಚ್ಚಿಕೊಂಡಿರುವ ಬೈಕ್ ಸವಾರರು, ಆಟೋ ಓಡಿಸುವವರು, ಕಾರುಗಳ ಮಾಲೀಕರು ಹೆಚ್ಚಿನ ಒಟ್ಟಿನಲ್ಲಿ ಯುದ್ಧದ ಬಿಸಿ ಎಲ್ಲಾ ಕ್ಷೇತ್ರಗಳಿಗೂ ಹಬ್ಬುತ್ತಿದ್ದು, ಜನ ಜೀವನದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತಿದೆ. ವದಂತಿಗಳಿಗೆ ಕಿವಿಗೊಡದಿರಿ ದೇಶದಲ್ಲಿ ಇಂಧನ ಕೊರತೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮನವಿ ಮಾಡಿದೆ. ದೇಶಕ್ಕೆ ಬೇಕಿರುವಷ್ಟು ಇಂಧನ ಲಭ್ಯವಿದೆ.

ಸಾರ್ವಜನಿಕರು ಯಾವುದೇ ರೀತಿಯ ಚಿಂತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ ಅಗತ್ಯಕ್ಕೆ ತಕ್ಕಂತೆ ಬಳಸಬೇಕೆಂದು ಪ್ರಕಟಣೆ ಹೊರಡಿಸಿದೆ. ಇತ್ತೀಚೆಗೆ ಹೊಟೇಲ್‌ಗಳು ಅತ್ಯಾಧುನಿಕ ಅಡುಗೆ ಮನೆ ವ್ಯವಸ್ಥೆ ಅಳವಡಿಸಿಕೊಂಡಿವೆ. ಹೀಗಾಗಿ ಇಲ್ಲಿ ಉರುವಲಾಗಿ ಕಟ್ಟಿಗೆ ಅಥವಾ ಇನ್ಯಾವುದೇ ದಹ್ಯ ವಸ್ತುಗಳನ್ನು ಬಳಸಲು ಅವಕಾಶವೇ ಇಲ್ಲ, ಇಂಥ ಅಡುಗೆ ಮನೆ ಹೊಂದಿರುವ ಹೊಟೇಲ್ ಮಾಲೀಕರು ಬಾಗಿಲು ಮುಚ್ಚಲೇಬೇಕಾದ ಅನಿವಾರ್ಯತೆ ಏದುರಾಗುತ್ತಿದೆ ಎಂದು ಹೊಟೇಲ್ ಮಾಲಿಕರು ಹಾಗೂ ರಸ್ತೆಬದಿಯ ಗೂಡಂಗಡಿ ವ್ಯಾಪಾರಸ್ಥರು ಅಳಲು ತೊಡಿಕೊಳ್ಳುತ್ತಿದ್ದಾರೆ.

ಬುಕ್ ಮಾಡಲು ತೊಂದರೆ:
ಪ್ರಸ್ತುತ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಬುಕ್ ಮಾಡಲು ಹೋದರೆ ಗ್ರಾಹಕರು ತಾಂತ್ರಿಕ ತೊಂದರೆ ಎದುರಿಸುತ್ತಿದ್ದಾರೆ. ಈ ಮುಂಚೆ ಮೊಬೈಲ್ ನಂಬರ್‌ಗೆ ಕರೆ ಮಾಡಿ ಬುಕ್ ಮಾಡಲಾಗುತಿತ್ತು. ಆದರೆ, ಈಗ ಕರೆ ಮಾಡಿ ಬುಕ್ ಮಾಡಲು ಹೋದರೆ ಮೊಬೈಲ್ ರಿಂಗ್ ಆಗುತ್ತಿಲ್ಲ. ಇದರಿಂದ ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ದೌಡಾಯಿಸಿ ಅಲ್ಲಿಯೇ ಹೋಗಿ ಬುಕ್ ಮಾಡಿ ಬರುತ್ತಿದ್ದಾರೆ.

ಬಿಸಿಯೂಟಕ್ಕೂ ತಟ್ಟಿದ ಬಿಸಿ:
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಅಕ್ಷರ ದಾಸೋಹ ಯೋಜನೆ, ವಿದ್ಯಾರ್ಥಿನಿಲಯಗಳಿಗೆ ಸಿಲಿಂಡ‌ರ್ ಪೂರೈಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಸದ್ಯ ಕೆಲವು ವಾರಗಳಿಗೆ ಆಗುವಷ್ಟು ದಾಸ್ತಾನು ಇದೆ. ಪರೀಕ್ಷೆಗಳು ನಡೆದಿದ್ದು, ಇನ್ನೇನು ಶೈಕ್ಷಣಿಕ ವರ್ಷ ಮುಗಿಯಲಿದೆ. ಹೀಗಾಗಿ ಹೆಚ್ಚು ತೊಂದರೆ ಆಗದು ಎಂದು ಅಧಿಕಾರಿಗಳು ಹೇಳುತ್ತಾರೆ.

ಗ್ರಾಹಕರ ಮೇಲೆ ಪರಿಣಾಮ:
ಖಾಸಗಿ ಕಂಪನಿಯ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರಿ ಹೆಚ್ಚಳವಾಗಿದ್ದು, 17 ಕೆಜಿಯ ವಾಣಿಜ್ಯ ಸಿಲಿಂಡರ್‌ಗೆ 1600 ರೂ. ಇದ್ದ ದರವೀಗ, ಒಂದೆರಡು ದಿನಗಳಲ್ಲೇ 1850 ಏರಿಕೆಯಾಗಿತ್ತು. ಸದ್ಯಕ್ಕೆ ಮಾರುಕಟ್ಟೆಯಲ್ಲಿ 17 ಕೆಜಿಗೆ 2100 ರೂ. ಪಡೆಯಲಾಗುತ್ತಿದ್ದು, ಅನಿವಾರ್ಯವಾಗಿ ಹೋಟೆಲ್ ಮಾಲೀಕರು ಖರೀದಿಸುತ್ತಿದ್ದು, ಟೀ, ಕಾಫಿ, ತಿಂಡಿಗಳ ದರವೂ ಹೆಚ್ಚಳ ಆಗುವ ಸಾಧ್ಯತೆಯಿದೆ. ಇದರ ಪರಿಣಾಮವೂ ನೇರವಾಗಿ ಗ್ರಾಹಕರ ಮೇಲೆಯೇ ಬೀಳಲಿದೆ.

Leave a Reply

Your email address will not be published. Required fields are marked *