ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರ ನೇಮಕಕ್ಕೆ ಆಗ್ರಹಕೂಡಲೇ ಕಾಯಂ ಶಿಕ್ಷಕರ ನೇಮಕವಾಗಲಿ: ಸುಜಯ ಪೂಜಾರಿ

ಉಡುಪಿ: ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳಲ್ಲೇ ಕನ್ನಡ ಅಧ್ಯಾಪಕರ ಕೊರತೆ ಎದುರಾಗಿರುವುದು ವಿಷಾದನೀಯ ಸಂಗತಿ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆ ಶಾಶ್ವತವಾಗಿ ಉಳಿಯಬೇಕಾದರೆ ಕನ್ನಡ ಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಯಂ ಕನ್ನಡ ಅಧ್ಯಾಪಕರನ್ನು ಕೂಡಲೇ ನೇಮಕ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

“ಕನ್ನಡ, ಕನ್ನಡ, ಕನ್ನಡ ಎಂದು ಹೆಮ್ಮೆಪಡುವ ಕರ್ನಾಟಕದಲ್ಲೇ ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರ ಕೊರತೆ ಉಂಟಾಗಿರುವುದು ಸರಿಯಲ್ಲ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಶಾಲಾ ಹಂತದಿಂದಲೇ ಹೆಚ್ಚಿನ ಆದ್ಯತೆ ನೀಡಬೇಕು. ಆಂಗ್ಲ ಭಾಷೆಯ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಕನ್ನಡಕ್ಕೆ ಸೂಕ್ತವಾದ ಪ್ರಾತಿನಿಧ್ಯ ಹಾಗೂ ಆದ್ಯತೆ ದೊರೆಯಬೇಕು” ಎಂದು ಸುಜಯ ಪೂಜಾರಿ ಹೇಳಿದ್ದಾರೆ.

ರಾಜ್ಯದ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಗತ್ಯವಿರುವಷ್ಟು ಕನ್ನಡ ಅಧ್ಯಾಪಕರನ್ನು ನೇಮಕ ಮಾಡುವಂತೆ ಶಿಕ್ಷಣ ಸಚಿವರು, ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ. ಕೂಡಲೇ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಕರ್ನಾಟಕ ಸೇನೆಯ ವತಿಯಿಂದ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು. ಪ್ರತಿಯೊಂದು ಶಾಲೆಯ ಎದುರು ದಿನಕ್ಕೊಂದು ಶಾಲೆಯಂತೆ ಧರಣಿ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಉಳಿಯಬೇಕು, ಕನ್ನಡ ಬೆಳೆಯಬೇಕು ಮತ್ತು ಮುಂದಿನ ಪೀಳಿಗೆಗೂ ಕನ್ನಡ ಭಾಷೆಯ ಮಹತ್ವ ತಲುಪಬೇಕು ಎಂಬುದೇ ನಮ್ಮ ಮುಖ್ಯ ಧ್ಯೇಯವಾಗಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುಜಯ ಪೂಜಾರಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *