ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಕುಂದಾಪುರ: ಕುಂದಾಪುರ ತಾಲೂಕಿನ ಪ್ರತಿಷ್ಠಿತ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 6ರಂದು ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಸ್. ಶೀನ ಪೂಜಾರಿ ವಹಿಸಿದ್ದರು. ಶ್ರೀಮತಿ ಸುಧಾ ಸಿ. ಶೆಟ್ಟಿ, ಶ್ರೀಮತಿ ಸಂಧ್ಯಾರಾಣಿ ಶೆಟ್ಟಿ ಹಾಗೂ ಕುಮಾರಿ ಸುಷ್ಟಿತಾ ಅವರ ಪ್ರಾರ್ಥನೆಯೊಂದಿಗೆ ಸಭೆಯ ಕಲಾಪಗಳು ಆರಂಭಗೊಂಡವು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಬಿತಾ ಅವರು ಸಂಘದ ವಾರ್ಷಿಕ ವರದಿ ಹಾಗೂ ಮಹಾಸಭೆಯ ನಡವಳಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಮಂಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಎಸ್. ಶೀನ ಪೂಜಾರಿ ಮಾತನಾಡಿ, 2025-26ನೇ ಸಾಲಿನಲ್ಲಿ ಸಂಘವು ₹105.23 ಕೋಟಿ ಸಾಲವನ್ನು ವಿತರಿಸಿದ್ದು, ₹2.53 ಕೋಟಿ ಲಾಭ ಗಳಿಸಿದೆ. ವಿವಿಧ ಖಾತೆಗಳಿಗೆ ಲಾಭ ಹಂಚಿಕೆ ಮಾಡಿದ ಬಳಿಕ ಪಾಲುದಾರ ಸದಸ್ಯರಿಗೆ ಶೇ.17ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ ಎಂದು ತಿಳಿಸಿದರು.

ವರದಿ ಸಾಲಿನಲ್ಲಿ ಸಂಘವು ₹502 ಕೋಟಿಗೂ ಅಧಿಕ ವ್ಯವಹಾರ ನಡೆಸಿದ್ದು, ಸಂಘದ ಸದಸ್ಯರು ಹಾಗೂ ಸಿಬ್ಬಂದಿಯ ಸಹಕಾರದಿಂದ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕಾಗಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಾಧಕರಿಗೆ ಸನ್ಮಾನಇದೇ ಸಂದರ್ಭದಲ್ಲಿ ಇತ್ತೀಚೆಗೆ ಸೇವಾ ನಿವೃತ್ತಿಗೊಂಡ ಸಂಘದ ಸಿಬ್ಬಂದಿ ನಾರಾಯಣ ಬಿ., ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಅವನಿ ಎ. ಪೂಜಾರಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕರುಣಾಕರ ಗಾಣಿಗ ಹಾಗೂ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅನ್ವರ್ಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕೃಷಿ ಪೂರಕ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದ ರೈತ ಸದಸ್ಯರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 7ನೇ ತರಗತಿ ಮತ್ತು ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಲ್ಲದೆ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ.95 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಗೌರವಧನ ನೀಡಿ ಅಭಿನಂದಿಸಲಾಯಿತು.

ಸಂಘದ ಉಪಾಧ್ಯಕ್ಷ ಸಂಜೀವ ಪೂಜಾರಿ, ನಿರ್ದೇಶಕರಾದ ಕೆ. ಮಹಾಲಿಂಗ, ಕೆ. ವಿಕಾಸ ಹೆಗ್ಡೆ, ರಾಮಕಿಶನ್ ಹೆಗ್ಡೆ, ನಟರಾಜ ಬಿ.ವಿ., ಅಶೋಕ ಪೂಜಾರಿ, ಅನುಪಮ ಶೆಟ್ಟಿ, ಸವಿತಾ ಪೂಜಾರಿ, ವೀರಾ ಹಾಗೂ ಸುರೇಶ ಪೂಜಾರಿ ಉಪಸ್ಥಿತರಿದ್ದರು.

ನಿರ್ದೇಶಕ ರಾಮಕಿಶನ್ ಹೆಗ್ಡೆ ಸ್ವಾಗತಿಸಿದರು. ನಿರ್ದೇಶಕ ಕೆ. ವಿಕಾಸ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಅಶೋಕ ಪೂಜಾರಿ ಧನ್ಯವಾದ ಸಮರ್ಪಿಸಿದರು. ಉಪ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ಗೌತಮ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *