ಛಾಯಾಗ್ರಹಣ ಕ್ಷೇತ್ರದ ನಿರಂತರ ಸಾಧನೆಗೆ ಇಪಿಎಸ್‌ಎ ಗೌರವ — ಯುವ ಛಾಯಾಗ್ರಾಹಕರಿಗೆ ಮಾರ್ಗದರ್ಶಕ, ಅಂತಾರಾಷ್ಟ್ರೀಯ ಪ್ರದರ್ಶನಗಳ ತೀರ್ಪುಗಾರರಾಗಿ ವಿಶಿಷ್ಟ ಸೇವೆ
ಉಡುಪಿ: ಛಾಯಾಗ್ರಹಣವನ್ನು ಕೇವಲ ಕ್ಯಾಮೆರಾದ ಚೌಕಟ್ಟಿಗೆ ಸೀಮಿತಗೊಳಿಸದೆ, ಸಮಾಜದ ಬದುಕು, ಸಂಸ್ಕೃತಿ ಮತ್ತು ಮಾನವೀಯ ಕಥನಗಳನ್ನು ದಾಖಲಿಸುವ ಶಕ್ತಿಶಾಲಿ ಮಾಧ್ಯಮವನ್ನಾಗಿ ರೂಪಿಸಿದ ಖ್ಯಾತ ಛಾಯಾಗ್ರಾಹಕ ಹಾಗೂ ಶಿಕ್ಷಕ ಆಸ್ಟ್ರೋ ಮೋಹನ್ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಗರಿ ಸೇರ್ಪಡೆಯಾಗಿದೆ.
ಛಾಯಾಗ್ರಹಣ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸೇವೆ ಮತ್ತು ಸಾಧನೆಗೆ ಇಪಿಎಸ್‌ಎ ಗೌರವ ಸಂದಿದ್ದು, ಅವರ ಅಂತಾರಾಷ್ಟ್ರೀಯ ಛಾಯಾಗ್ರಹಣ ಪಯಣಕ್ಕೆ ಮತ್ತೊಂದು ಮಹತ್ವದ ಅಧ್ಯಾಯ ತೆರೆದಿದೆ. ಕ್ಯಾಮೆರಾ ಹಿಂದಿನ ಕಲಾವಿದ ಮಾತ್ರವಲ್ಲ. ಆಸ್ಟ್ರೋ ಮೋಹನ್ ಅವರು ಛಾಯಾಗ್ರಾಹಕರಾಗಿ ಗುರುತಿಸಿ ಕೊಂಡಿರುವುದರ ಜೊತೆಗೆ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಛಾಯಾಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತಾ, ಛಾಯಾಗ್ರಹಣ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಬೆಳೆಸುವ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ.
ಪ್ರಸ್ತುತ ಅವರು ಪಿಎಸ್‌ಎ (PSA) ಭಾರತದ ಸಹಾಯಕ ದೇಶೀಯ ಸದಸ್ಯತ್ವ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಎಸ್‌ಎ ಚಟುವಟಿಕೆಗಳನ್ನು ದೇಶದಲ್ಲಿ ಉತ್ತೇಜಿಸುವುದರ ಜತೆಗೆ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳು ಹಾಗೂ ವಿವಿಧ ಗೌರವ ಪದವಿಗಳ ಕುರಿತು ಆಸಕ್ತಿ ಹೊಂದಿರುವ ಛಾಯಾಗ್ರಾಹಕರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.
ವಿದ್ಯಾರ್ಥಿಗಳಿಂದ ಪತ್ರಕರ್ತರವರೆಗೆ ತರಬೇತಿ : ಛಾಯಾಗ್ರಹಣದ ಜ್ಞಾನವನ್ನು ತಮ್ಮಲ್ಲೇ ಸೀಮಿತಗೊಳಿಸದೆ, ಮುಂದಿನ ಪೀಳಿಗೆಗೆ ಹಂಚುವ ಕಾರ್ಯಕ್ಕೂ ಆಸ್ಟ್ರೋ ಮೋಹನ್ ಆದ್ಯತೆ ನೀಡಿದ್ದಾರೆ. ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಉದಯೋನ್ಮುಖ ಛಾಯಾಗ್ರಾಹಕರಿಗಾಗಿ ಹಲವು ಕಾರ್ಯಾಗಾರಗಳು, ಉಪನ್ಯಾಸಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಛಾಯಾಗ್ರಹಣ ಸಂಘಟನೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಛಾಯಾಗ್ರಹಣ ಕ್ಷೇತ್ರದ ಸಂಘಟನಾತ್ಮಕ ಬೆಳವಣಿಗೆಯಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಗೌರವಗಳ ಸರಮಾಲೆ : ಆಸ್ಟ್ರೋ ಮೋಹನ್ ಅವರ ಸಾಧನೆಯ ಪಟ್ಟಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಗೌರವಗಳಿಂದ ಕೂಡಿದೆ. ಇಪಿಎಸ್‌ಎ, ಪಿಪಿಎಸ್‌ಎ, ಎಪಿಎಸ್‌ಎ, ಎಎಫ್‌ಐಎಪಿ, ಇಎಫ್‌ಐಪಿ, ಎಫ್‌ಐಐಪಿಸಿ, ಎಂಎಸ್‌ಎಪಿ, ಗೌರವ ಇಯುಎಸ್‌ಪಿಎ, ಗೌರವ ಎಫ್‌ಎಸ್‌ಡಬ್ಲ್ಯುಎಎನ್, ಗೌರವ ಎಫ್‌ಐಸಿಎಸ್, ಗೌರವ ಎಫ್‌ಎಸ್‌ಎಪಿ, ಎಪಿಸಿಎ ಹಾಗೂ ಐಐಜಿ/ಎಸ್ ಸೇರಿದಂತೆ ಹಲವು ಗೌರವಗಳು ಅವರ ಛಾಯಾಗ್ರಹಣ ಸಾಧನೆಗೆ ಸಂದಿವೆ. ಅಲ್ಲದೆ, ಅವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರದಾಚೆಗಿನ ಬದುಕಿನ ದಾಖಲೆ : ಆಸ್ಟ್ರೋ ಮೋಹನ್ ಅವರ ಛಾಯಾಗ್ರಹಣದ ವಿಶೇಷತೆ ಕೇವಲ ಸುಂದರ ಚಿತ್ರ ಸೆರೆಹಿಡಿಯುವುದರಲ್ಲಿ ಮಾತ್ರವಲ್ಲ. ಸಮಾಜದ ಬದಲಾವಣೆಗಳು, ಸಾಂಸ್ಕೃತಿಕ ಪರಂಪರೆ, ಮಾನವೀಯ ಸಂಬಂಧಗಳು ಹಾಗೂ ಸಾಮಾನ್ಯ ಜನರ ಬದುಕಿನ ವಿವಿಧ ಆಯಾಮಗಳನ್ನು ತಮ್ಮ ಕ್ಯಾಮೆರಾದ ಮೂಲಕ ದಾಖಲಿಸುವ ಪ್ರಯತ್ನ ಅವರ ಛಾಯಾಗ್ರಹಣದ ಪ್ರಮುಖ ಅಂಶವಾಗಿದೆ.
“ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ” ಎಂಬ ಮಾತಿಗೆ ಅರ್ಥ ತುಂಬುವ ರೀತಿಯಲ್ಲಿ, ಸಮಾಜದ ನೆನಪುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಮತ್ತು ಸ್ಥಳೀಯ ಬದುಕಿನ ಕಥೆಗಳನ್ನು ಜಾಗತಿಕ ವೇದಿಕೆಗೆ ತಲುಪಿಸುವ ಪ್ರಯತ್ನಕ್ಕೆ ಅವರ ಕೆಲಸ ಸಾಕ್ಷಿಯಾಗಿದೆ. ಇಪಿಎಸ್‌ಎ ಗೌರವವು ಆಸ್ಟ್ರೋ ಮೋಹನ್ ಅವರ ವೈಯಕ್ತಿಕ ಸಾಧನೆಗೆ ಮಾತ್ರ ಸೀಮಿತವಾಗದೆ, ಕರ್ನಾಟಕದ ಛಾಯಾಗ್ರಹಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿರುವುದಕ್ಕೆ ಮತ್ತೊಂದು ಗಮನಾರ್ಹ ಮಾನ್ಯತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.












Leave a Reply