ನಾವುಗಳು ಭಕ್ತಿಯಿಂದ ಆಚರಿಸುವ, ಪಾಲಿಸುವ ಹಬ್ಬಗಳು ಎಲ್ಲಾ ಧರ್ಮಗಳೊಂದಿಗೆ ಸಾಮ್ಯತೆಯನ್ನು ಹೊಂದಿ ಏಕೋಪಾದಿಯಲ್ಲಿ ಸಾಗುವ ತಾತ್ವಿಕ ನೆಲಗಟ್ಟಿನ ಮೇಲೆ ನಿಂತಿವೆ. ಆಚರಣೆಯ ವಿಧಗಳು ಬೇರೆಯಾದರೂ ಅವುಗಳ ಉದ್ದೇಶ ಒಂದೇ ಆಗಿದೆ. ಇಂತಹ ಒಂದು ಸಂಗತಿಗೆ ಸೂಕ್ತ ನಿದರ್ಶನವೆಂದರೆ ಮಾರ್ಚ್ ತಿಂಗಳಲ್ಲಿ ಬರುವ ಹಿಂದೂಗಳ ಹೊಸ ವರ್ಷದ ಯುಗಾದಿ ಹಬ್ಬ ಹಾಗೂ ಮುಸ್ಲಿಮರ ಹೊಸ ವರ್ಷದ ರಂಜಾನ್ ಹಬ್ಬ . ಇವೆರಡು ಒಂದೇ ಧಾರ್ಮಿಕ ಬಂಡಿಗೆ ಕಟ್ಟಿದ ಜೋಡೆತ್ತುಗಳಾಗಿವೆ. ಪ್ರತಿಯೊಂದು ಹಬ್ಬವು ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿದ್ದು , ಇವುಗಳ ಮೂಲ ಉದ್ದೇಶ ಮನುಷ್ಯರಲ್ಲಿ ಸಹ ಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿದೆ.


ಹಿಂದೂಗಳ ಪ್ರಕಾರ ಚೈತ್ರ ಮಾಸದ ಶುದ್ಧ ಪಾಡ್ಯಮಿಯೆಂದು ಹೊಸ ವರ್ಷವೂ “ಯುಗಾದಿ” ಹಬ್ಬದ ಆಚರಣೆಯ ಮೂಲಕ ಆಚರಿಸಲ್ಪಡುವುದು ಬ್ರಹ್ಮದೇವನು ಸೃಷ್ಟಿಯನ್ನು ಇದೇ ಶುಭ ದಿನದಂದು ನಿರ್ಮಿಸಿದನು , ಹಾಗಾಗಿ ಈ ಹಬ್ಬವು ಹಿಂದೂಗಳ ಪಾಲಿಗೆ ನವಯುಗ ಅಥವಾ ಯುಗ + ಆದಿ = ಯುಗಾದಿಯಾಗಿ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಈ ಹಬ್ಬದಂದು ಹಿಂದುಗಳು ಎಣ್ಣೆ ಸ್ನಾನ , ದೇವರ ದರ್ಶನ ಹಾಗೂ ವಿವಿಧ ಭಕ್ಷ್ಯಗಳನ್ನು ಮಾಡಿ ಸಂಬಂಧಿಕರಿಗೆ ಪರಸ್ಪರ ಹಂಚಿ ಭೋಜನ ಮಾಡುವರು, ಹೊಸ ಬಟ್ಟೆಗಳನ್ನು ಧರಿಸಿ ಮನೆಗೆಲ್ಲಾ ತಳಿರು ತೋರಣ ಹಾಗೂ ಚಂದದ ರಂಗೋಲಿ ಬಿಡಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಸಂಭ್ರಮ ಪಡುವರು.


ಅದೇ ತೆರನಾಗಿ ರಂಜಾನ್ ತಿಂಗಳು ಮುಸ್ಲಿಂ ಬಾಂಧವರಿಗೆ ಪವಿತ್ರ ಹಬ್ಬವಾಗಿದ್ದು ಇದು ತಿಂಗಳುಗಟ್ಟಲೆ ಉಪವಾಸ (ರೋಜಾ)ವನ್ನು ಮಾಡಿ ಆತ್ಮಶುದ್ಧಿಯನ್ನು ಮಾಡಿಕೊಳ್ಳುವ ಸತ್ಕಾಲವಾಗಿದೆ. ಈ ತಿಂಗಳಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರರು ಅವತರಿಸಿದ್ದು ಇದನ್ನು ಮುಸ್ಲಿಮರು ಹೊಸ ವರ್ಷವೆಂದು ಆಚರಿಸುತ್ತಾರೆ. ದಿನಕ್ಕೆ ಐದು ಬಾರಿ ನಮಾಜ್ (ಪ್ರಾರ್ಥನೆ )ಮಾಡುವರು. ದಾನ,ಧರ್ಮ (ಜಕಾತ್) ಅನ್ನು ಮಾಡುವುದರ ಮೂಲಕ ತಮ್ಮ ಪೂರ್ವ ಹಾಗೂ ಈಗಿನ ಪಾಪ ಕಾರ್ಯಗಳಿಗೆ ಪುಣ್ಯಫಲ ದೊರಕಿಸಿಕೊಳ್ಳುವರು. ನಂತರ ವಿವಿಧ ಭಕ್ಷ್ಯ ಭೋಜನಗಳನ್ನು ಮಾಡಿ ಉಪವಾಸದವರಿಗೆ ಊಟ (ರೋಜದಾರ್) ಏರ್ಪಡಿಸಿ ಪರಸ್ಪರ ಹಂಚಿ ತಿನ್ನುವರು. ಹೊಸ ಬಟ್ಟೆ ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ಧರಿಸಿ ಸಂಭ್ರಮ ಪಡುವರು .
ಈ ರೀತಿಯಾಗಿ ವಿವಿಧತೆಯಲ್ಲಿ ಏಕತೆ ಸಾರುವ ಈ ಹಬ್ಬಗಳು ನಮ್ಮಲ್ಲಿ ಭ್ರಾತೃತ್ವ ಭಾವನೆ ಬೆಳೆಸಿ, ಸುಖೀ ಜೀವನ ನಡೆಸಲು ದಾರಿ ದೀಪಗಳಾಗಿವೆ…
🖋️ ಕಿರಣ್ ಪೂಜಾರಿ, ಸಂಪಾದಕರು













Leave a Reply