ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಕ್ಷಾಬಂಧನವು ಸಹೋದರತ್ವ, ರಕ್ಷಣೆ ಹಾಗೂ ಭಾರತೀಯ ಸಂಸ್ಕೃತಿಯ ಪ್ರತೀಕ: ಕಲ್ಪನಾ ಭಾಸ್ಕರ್

ಕೋಟೇಶ್ವರ: ಶಚಿದೇವಿ ಇಂದ್ರನಿಗೆ ಜಯ ದೊರಕಲೆಂದು ರಕ್ಷೆ ಕಟ್ಟಿದರೆ, ದ್ರೌಪದಿ ಶ್ರೀಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದಾಗ ತನ್ನ ಸೀರೆಯ ಸೆರಗನ್ನು ಹರಿದು ಗಾಯಕ್ಕೆ ರಕ್ಷೆ ಕಟ್ಟಿದಳು ಎಂಬ ಪೌರಾಣಿಕ ಕಥೆಗಳು ರಕ್ಷಾಬಂಧನದ ಮಹತ್ವವನ್ನು ಸಾರುತ್ತವೆ ಎಂದು ರಾಷ್ಟ್ರಸೇವಿಕಾ ಸಮಿತಿ ಮಂಗಳೂರು ವಿಭಾಗದ ಸಹಕಾರ್ಯವಾಹಿಕಾ ಶ್ರೀಮತಿ ಕಲ್ಪನಾ ಭಾಸ್ಕರ್ ಹೇಳಿದರು.

ರೋಟರಿ ಸಮುದಾಯ ದಳ ಕೋಟೇಶ್ವರದ ವತಿಯಿಂದ ಆಯೋಜಿಸಲಾದ ರಕ್ಷಾಬಂಧನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಪರಸ್ಪರ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಲಾಯಿತು.

ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷೆ ರೊ. ಅಕ್ಷತಾ ಗಿರೀಶ್ ಐತಾಳ್ ಅವರು ಮಾತನಾಡಿ, “ವಿದ್ಯೆಯನ್ನು ಕಲಿಸುವ ಗುರುವಿಗೆ ನಾವು ಗೌರವದಿಂದ ನಡೆದುಕೊಳ್ಳಬೇಕು. ಆಗಷ್ಟೇ ನಮ್ಮ ಬದುಕು ಸುಂದರವಾಗುತ್ತದೆ” ಎಂದು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಸುಶೀಲಾ ಹೊಳ್ಳ, ನಾಗರತ್ನ ಉಡುಪ, ವನಿತಾ ಹಾಗೂ ಜಯಸುಧಾ ಅವರನ್ನು ಗೌರವಿಸಲಾಯಿತು.

ರೋಟರಿ ಸಮುದಾಯ ದಳ ಕೋಟೇಶ್ವರದ ಅಧ್ಯಕ್ಷೆ ಸುಪ್ರೀತಾ ಪುರಾಣಿಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಮುದಾಯ ದಳದ ಸಭಾಪತಿ ರೊ. ಪ್ರಭಾಕರ್ ಕುಂಭಾಶಿ, ರೋಟರಿ ಕ್ಲಬ್ ಕೋಟೇಶ್ವರದ ಕಾರ್ಯದರ್ಶಿ ರೊ. ಅರುಣ ದೇವಾಡಿಗ ಹಾಗೂ ರೋಟರಿ ಸಮುದಾಯ ದಳ ಕೋಟೇಶ್ವರದ ಕಾರ್ಯದರ್ಶಿ ಸುಷ್ಮಾ ಉಪಾಧ್ಯ ಉಪಸ್ಥಿತರಿದ್ದರು.ಪ್ರತಿಮಾ ಚಂದ್ರಶೇಖರ್ ಪ್ರಾರ್ಥಿಸಿದರು. ಉಷಾ ರಮೇಶ್ ಸ್ವಾಗತಿಸಿದರು. ರೇವತಿ ತೆಕ್ಕಟ್ಟೆ ಹಾಗೂ ವಾಣಿಶ್ರೀ ಹೆಬ್ಬಾರ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಸುಜಾತ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ನೇತ್ರಾವತಿ ಗೋಪಾಡಿ ವಂದಿಸಿದರು.

Leave a Reply

Your email address will not be published. Required fields are marked *