ಕೋಟ: “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯಪುಸ್ತಕದ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳು ಅತೀ ಅಗತ್ಯವಾಗಿದೆ” ಎಂದು ಪ್ರಸಿದ್ಧ ಲೇಖಕಿ ಪಾರ್ವತಿ ಜಿ. ಐತಾಳ್ ಅವರು ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕೋಟದ ವಿವೇಕ ಬಾಲಿಕಾ ಪ್ರೌಢಶಾಲೆಯ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾತೃಭಾಷೆಯ ಜೊತೆಗೆ ಬೇರೆ ಭಾಷೆಗಳನ್ನು ಕಲಿತರೆ ಲೋಕ ಜ್ಞಾನವನ್ನು ಬೇಗನೆ ತಿಳಿದುಕೊಳ್ಳಬಹುದು. ಕನ್ನಡದಂತೆಯೇ ಬೇರೆ ಭಾಷೆಗಳ ವ್ಯಾಕರಣವನ್ನು ಸರಿಯಾಗಿ ಕಲಿತರೆ ಮಾತ್ರ ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಗೆ ಯಶಸ್ವಿಯಾಗಿ ಅನುವಾದಿಸಲು ಸಾಧ್ಯವಾಗುತ್ತದೆ. ಬದುಕಿನ ಆಳ-ಅಗಲಗಳನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯದ ಅಗತ್ಯವಿದೆ. ವಿದ್ಯಾರ್ಥಿಗಳು ಮಕ್ಕಳ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಮೂಲಕ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.
ಸಾಹಿತ್ಯವು ನಾವು ಹೇಗೆ ಬದುಕಬೇಕು ಮತ್ತು ಹೇಗೆ ಬದುಕಬಾರದು ಎಂಬುದನ್ನು ಕಲಿಸಿಕೊಡುತ್ತದೆ ಎಂದು ಮಾರ್ಮಿಕವಾಗಿ ನುಡಿದ ಅವರು, “ಹಿಂದಿನ ಕಾಲದಲ್ಲಿ ಪೋಷಕರು ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುತ್ತಿದ್ದರು. ಆದರೆ ಇಂದು ಮೊಬೈಲ್ ಹವ್ಯಾಸಕ್ಕೆ ಬಿದ್ದಿರುವ ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಗಮನ ಕೊಡುತ್ತಿಲ್ಲದಿರುವುದು ಅತ್ಯಂತ ವಿಷಾದಕರ ಸಂಗತಿ. ಪ್ರತಿ ಶಾಲೆಯೂ ಸಾಹಿತ್ಯ ಸಂಘಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಥೆ, ಕವನ ಹಾಗೂ ನಾಟಕಗಳನ್ನು ಬರೆಯುವ ಆಸಕ್ತಿಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮಾಲಿನಿ ರಮೇಶ್ ಅವರು ಪಾಠ ಗೀತ ಗಾಯನವನ್ನು ಪ್ರಸ್ತುತ ಪಡಿಸಿದರು. ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಉಡುಪ ಸ್ವಾಗತಿಸಿದರು.ವೇದಿಕೆಯಲ್ಲಿ ಸಾಹಿತ್ಯ ಸಂಘದ ಸಂಚಾಲಕಿ ಮಹಾಲಕ್ಷ್ಮೀ ಹಾಗೂ ಕಾರ್ಯದರ್ಶಿ ಕುಮಾರಿ ಅನಘಾ ಎಮ್ ಹೊಳ್ಳ ಉಪಸ್ಥಿತರಿದ್ದರು. ಕುಮಾರಿ ಸೃಷ್ಠಿ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೋಟದ ವಿವೇಕ ಬಾಲಿಕಾ ಪ್ರೌಢಶಾಲೆಯ ಸಾಹಿತ್ಯ ಸಂಘವನ್ನು ಲೇಖಕಿ ಪಾರ್ವತಿ ಜಿ. ಐತಾಳ್ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಉಡುಪ, ಸಾಹಿತ್ಯ ಸಂಘದ ಸಂಚಾಲಕಿ ಮಹಾಲಕ್ಷ್ಮೀ, ಕಾರ್ಯದರ್ಶಿ ಕುಮಾರಿ ಅನಘಾ ಎಮ್ ಹೊಳ್ಳ ಇದ್ದರು.











Leave a Reply