ಉಡುಪಿಯ ‘ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್’ ಮತ್ತು ‘ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್’ ಸಂಸ್ಥೆಗಳು, ಬೆಂಗಳೂರಿನ ‘ಒನ್ಸೈಟ್ ಎಸಿಲೋರ್ ಲಕ್ಸೊಟಿಕಾ ಫೌಂಡೇಶನ್’ (OneSight EssilorLuxottica Foundation) ಹಾಗೂ ಗೋವಾ ಸರ್ಕಾರದ ಸಹಯೋಗದೊಂದಿಗೆ, ಗೋವಾ ರಾಜ್ಯಾದ್ಯಂತ ಸರಕಾರೀ ಶಾಲೆಗಳ ವಿದ್ಯಾರ್ಥಿಗಳಿಗೆ 2ನೆಯ ಬಾರಿ ನಡೆಸಲಾಗುವ ಕಣ್ಣಿನ ಆರೋಗ್ಯ ಪರೀಕ್ಷಾ ಕಾರ್ಯಕ್ರಮಗಳನ್ವಯ, ಸುಮಾರು 2,000 ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ರವರು ಸಾಂಖಳಿ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿದರು.
ಮಾನ್ಯ ಮುಖ್ಯಮಂತ್ರಿಗಳು ಮಾತನಾಡುತ್ತಾ ಈ ಕಾರ್ಯಕ್ರಮವು ಗೋವಾ ರಾಜ್ಯದಾದ್ಯಂತ ಇರುವ 1,717 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು ಒಳಗೊಂಡಿರುತ್ತದೆ. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಪ್ರಾಥಮಿಕ ಕಣ್ಣಿನ ತಪಾಸಣೆಗೆ ಅಗತ್ಯವಿರುವ ಮೂಲಭೂತ ಜ್ಞಾನ ಮತ್ತು ಕೌಶಲ್ಯಗಳನ್ನು ಶಿಕ್ಷಕರಿಗೆ ಒದಗಿಸುವ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದೆ.ನಿಮ್ಮ ಸಕ್ರಿಯ ಸಹಭಾಗಿತ್ವದೊಂದಿಗೆ, ಗೋವಾದ ಯಾವುದೇ ಮಗು ಪತ್ತೆಯಾಗದ ದೃಷ್ಟಿ ಸಮಸ್ಯೆಯಿಂದಾಗಿ ಹಿಂದುಳಿಯದಂತೆ ಮಾಡುವ ನಮ್ಮ ಪ್ರಯತ್ನಗಳು ಮತ್ತಷ್ಟು ಬಲಗೊಳ್ಳಲಿವೆ ಎಂಬ ವಿಶ್ವಾಸ ನನಗಿದೆ.
ತಂತ್ರಜ್ಞಾನವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದರೂ, ಮಕ್ಕಳಲ್ಲಿ ಅದರ ಅತಿಯಾದ ಅಥವಾ ಸೂಕ್ತವಲ್ಲದ ಬಳಕೆ ಕಳವಳಕಾರಿ ವಿಷಯವಾಗಿದೆ. ನಮ್ಮ ಮಕ್ಕಳು ಕೇವಲ ಡಿಜಿಟಲ್ ಜಗತ್ತಿಗಷ್ಟೇ ಸೀಮಿತವಾಗಿರದ, ಅದಕ್ಕಿಂತ ವಿಶಾಲವಾದ ಬಾಲ್ಯವನ್ನು ಅನುಭವಿಸಲು ಅರ್ಹರಾಗಿದ್ದಾರೆ. ಆದ್ದರಿಂದ, ತಂತ್ರಜ್ಞಾನವು ನಮ್ಮ ಮಕ್ಕಳಿಗೆ ಕಲಿಯಲು, ಬೆಳೆಯಲು ಮತ್ತು ಅನ್ವೇಷಿಸಲು ಸಹಾಯ ಮಾಡುವ ಸಾಧನವಾಗಿರಬೇಕು; ಅದು ಅತಿಯಾದ ಅವಲಂಬನೆ ಅಥವಾ ಗಮನಚಲನೆಯ ಮೂಲವಾಗಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ತಂತ್ರಜ್ಞಾನದ ಆರೋಗ್ಯಕರ ಮತ್ತು ಸಮತೋಲನದ ಬಳಕೆಯತ್ತ ನಮ್ಮ ಮಕ್ಕಳನ್ನು ಮಾರ್ಗದರ್ಶಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಡಿಜಿಟಲ್ ಜಗತ್ತು ಸಂತೋಷಕರ, ಆರೋಗ್ಯಕರ ಮತ್ತು ಸಮಗ್ರ ಬಾಲ್ಯಕ್ಕೆ ಅಗತ್ಯವಾದ ನೈಜ ಜೀವನದ ಅನುಭವಗಳಿಗೆ ಪೂರಕವಾಗಿರಬೇಕು; ಅವುಗಳನ್ನು ಎಂದಿಗೂ ಬದಲಿಸಬಾರದು.ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್, ಉಡುಪಿ ಇದರ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸಾದ್ ಹಾಗೂ ಅವರ ಸಂಪೂರ್ಣ ತಂಡ ಹಾಗೂ ಒನ್ಸೈಟ್ ಎಸ್ಸಿಲಾರ್ ಲಾಕ್ಸೊಟ್ಟಿಕ ಫೌಂಡೇಶನ್, ಬೆಂಗಳೂರು ಈ ತರಬೇತಿ ಕಾರ್ಯಕ್ರಮದ ಆಯೋಜನೆ ಮತ್ತು ಅನುಷ್ಠಾನಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ನನ್ನ ಹೃತ್ಪೂರ್ವಕ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
ನಮ್ಮ ಶಿಕ್ಷಕರೊಂದಿಗೆ ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳಲು ಅವರು ತೋರಿದ ಬದ್ಧತೆ, ವೃತ್ತಿಪರ ಪರಿಣತಿ ಹಾಗೂ ಸಿದ್ಧತೆ ನಿಜಕ್ಕೂ ಶ್ಲಾಘನೀಯವಾಗಿದೆ. ಮಕ್ಕಳಲ್ಲಿ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಅವರಿಗೆ ಸೂಕ್ತವಾದ ಕಣ್ಣಿನ ಆರೈಕೆಯನ್ನು ಸಮಯೋಚಿತವಾಗಿ ಒದಗಿಸುವ ನಮ್ಮ ಪ್ರಯತ್ನಗಳನ್ನು ಬಲಪಡಿಸುವಲ್ಲಿ ಈ ತರಬೇತಿಯು ಮಹತ್ವದ ಪಾತ್ರ ವಹಿಸಲಿದೆ. ‘ವಿಷನ್ ಫಾರ್ ಆಲ್’ ಕಾರ್ಯಕ್ರಮವು ಕೇವಲ ಕಣ್ಣಿನ ಆರೈಕೆಯ ಒಂದು ಉಪಕ್ರಮವಲ್ಲ. ಇದು ನಮ್ಮ ಮಕ್ಕಳು, ನಮ್ಮ ಕುಟುಂಬಗಳು ಮತ್ತು ಒಟ್ಟಾರೆ ಜನರ ಕ್ಷೇಮಾಭಿವೃದ್ಧಿಯಲ್ಲಿ ನಾವು ಮಾಡುತ್ತಿರುವ ಒಂದು ಹೂಡಿಕೆಯಾಗಿದೆ ಎಂದರು.
ಡಾ. ಕೃಷ್ಣ ಪ್ರಸಾದ್ ಅವರು ಮಾತನಾಡುತ್ತಾ, ಮಾನ್ಯ ಮುಖ್ಯಮಂತ್ರಿಯವರು, ತನ್ನ ಜನಹಿತ ಕಾರ್ಯಗಳಿಂದ ಗೋವಾರಾಜ್ಯವನ್ನು ನಂಬರ್ ಒನ್ ಸ್ಥಾನಕ್ಕೆ ತರುವಲ್ಲಿ ಬಹಳ ಶ್ರಮ ವಹಿಸುತ್ತಿದ್ದಾರೆ, ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಅಪಾರ ಗಮನದಿಂದ ಇಡೀ ರಾಜ್ಯವನ್ನು ಅಂಧ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಎರಡನೆಯ ಬಾರಿ ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳ ದೃಷ್ಟಿ ದೋಷ ಪರೀಕ್ಷೆ ಹಾಗೂ ಚಿಕಿತ್ಸೆಯ ಬಗ್ಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಕ್ಕಳ ದೃಷ್ಟಿ ದೋಷದಲ್ಲಿ ಮೊಬೈಲ್, ಕಂಪ್ಯೂಟರ್, ಟಿವಿ ಮುಂತಾದುವುಗಳು ಬಹಳ ಋಣಾತ್ಮಕ ಪರಿಣಾಮ ಬೀರುತ್ತವೆ. ಆದುದರಿಂದ ಸರಕಾರ ವಿದ್ಯಾರ್ಥಿಗಳಿಗೆ ಡಿಜಿಟಲ್ ಹೈಜಿನ್ ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿ ಡಾ. ಕೃಷ್ಣ ಪ್ರಸಾದ್ ಅವರ ನಿರಂತರ ಕಮ್ಯುನಿಟಿ ನೇತ್ರ ಸೇವೆಯನ್ನು ಗುರುತಿಸಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಗೌರವಿಸಿದರು.
‘ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್’ ಸಂಸ್ಥೆ ಹಾಗೂ ಗೋವಾ ಸರ್ಕಾರದ ಸಹಯೋಗದೊಂದಿಗೆ, 2024ರಲ್ಲಿ ಗೋವಾದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ “ವಿಷನ್ ಫಾರ್ ಆಲ್” (Vision for All – ಎಲ್ಲರಿಗೂ ದೃಷ್ಟಿ) ಎಂಬ ಶಾಲಾ ಕಣ್ಣಿನ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸಿದವು. ಪ್ರಾಥಮಿಕ ದೃಷ್ಟಿ ತಪಾಸಣೆ ನಡೆಸಲು ಸುಮಾರು 2,000 ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಇದರ ಪರಿಣಾಮವಾಗಿ, ಹೆಚ್ಚಿನ ತಪಾಸಣೆಯ ಅಗತ್ಯವಿರುವ ಸುಮಾರು 30,000 ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.
ತದನಂತರ, ನಮ್ಮ ತಂಡವು ಗುರುತಿಸಲ್ಪಟ್ಟ ಮಕ್ಕಳನ್ನು ಪರೀಕ್ಷಿಸಿ, ಸುಮಾರು 8,000 ಉಚಿತ ಕನ್ನಡಕಗಳನ್ನು ವಿತರಿಸಿತು ಮತ್ತು ‘ಪ್ರಸಾದ್ ನೇತ್ರಾಲಯ’ದಲ್ಲಿ ಅಗತ್ಯ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಿತು ಎಂಬುವುದನ್ನು ಇಲ್ಲಿ ಸ್ಮರಿಸಬಹುದು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಪ್ರಸಾದ್ ರೈ – ಮುಖ್ಯ ವ್ಯವಸ್ಥಾಪಕರು, ಒನ್ಸೈಟ್ ಎಸ್ಸಿಲಾರ್ ಲಕ್ಸೊಟ್ಟಿಕಾ ಫೌಂಡೇಶನ್ , . ಶ್ರೀಮತಿ ಅಂಜನಾ ಕಾಮತ್ – ಅಧ್ಯಕ್ಷರು, ಸಾಂಖಳಿ ನಗರಸಭೆ,. ಶ್ರೀ ದತ್ತಾರಾಮ್ ಡಿ. ಚಿಮುಲ್ಕರ್ – ಉಪಾಧ್ಯಕ್ಷರು, ರವೀಂದ್ರ ಭವನ, ಸಾಂಖಳಿ, , ಶ್ರೀ ಸುಂದರ್ ನಾಯಕ್ – ಸದಸ್ಯರು, ಪಾಳೆ ಜಿಲ್ಲಾ ಪಂಚಾಯತ್ ಕ್ಷೇತ್ರ., ಶ್ರೀ ಭಗೀರಥ್ ಶೆಟ್ಯೆ – ನಿರ್ದೇಶಕರು, ಶಿಕ್ಷಣ ನಿರ್ದೇಶನಾಲಯ., ಶ್ರೀ ವಿಜಯ್ ಬಿ. ಸಕ್ಸೇನಾ – ನಿರ್ದೇಶಕರು, ಯೋಜನೆ, ಅಂಕಿಅಂಶ ಮತ್ತು ಮೌಲ್ಯಮಾಪನ ಇಲಾಖೆ., ಶ್ರೀ ಮೆಲ್ವಿನ್ ಡಿ’ಕೋಸ್ಟಾ – ಸಹಾಯಕ ನಿರ್ದೇಶಕರು, ಶಿಕ್ಷಣ ಇಲಾಖೆ, ಪೋಂಡಾ ಉಪಸ್ಥಿತರಿದ್ದರು.












Leave a Reply