ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಕ್ಕಳೇ ಅತಿಥಿಗಳು, ಮಕ್ಕಳೇ ಸಭೆಯ ಸಾರಥಿಗಳು: ವಿಶಿಷ್ಟ ವಾರ್ಷಿಕೋತ್ಸವಕ್ಕೆ ಈ ಬಾರಿ ‘ಹೊನಲು’ ಹೆಸರು!

ಇಲ್ಲಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳೇ ಉದ್ಘಾಟಕರು, ಅಧ್ಯಕ್ಷತೆ ಅವರದ್ದೇ, ಮುಖ್ಯ ಅತಿಥಿಗಳೂ ಅವರೇ. ಜನಪ್ರತಿನಿಧಿಗಳು, ಗಣ್ಯರು, ಇಲಾಖೆಯ ಅಧಿಕಾರಿಗಳು ವೇದಿಕೆಯ ಕೆಳಗೆ ಪ್ರೇಕ್ಷಕರ ಸಾಲಿನಲ್ಲಿದ್ದುಕೊಂಡೆ ವೇದಿಕೆಯ ಮೇಲಿನ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಈ ಮಾದರಿಯಲ್ಲಿ ಇಲ್ಲಿ ಶಾಲಾ ಮಕ್ಕಳ ಹಬ್ಬ ಆಚರಿಸಲಾಗುತ್ತಿದೆ. ವೇದಿಕೆಯ ಮೇಲಿನ ಸಭಾ ನಡಾವಳಿಗಳನ್ನು ಮಕ್ಕಳೇ ನಿರ್ವಹಿಸುತ್ತಾರೆ.

ಉದ್ಘಾಟನೆಗೆ ಹಾಗೂ ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಆಹ್ವಾನಿಸಲಾಗುತ್ತದೆ. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೂ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದು ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ನಡೆಯುವ ಶಾಲಾ ವಾರ್ಷಿಕೋತ್ಸವವಾಗಿ ನಡೆಯುತ್ತದೆ. ವಾರ್ಷಿಕೋತ್ಸವದ ಬೆಳಿಗ್ಗೆಯ ಕಾರ್ಯಕ್ರಮದಲ್ಲಿ ‘ಪೋಷಕರಿಗೆ ಗೌರವ’ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುತ್ತದೆ. ಇಲ್ಲಿ ಶಾಲೆಯ ಎಲ್ಲಾ ಪೋಷಕರನ್ನು ಅವರನ್ನು ಮಕ್ಕಳೊಂದಿಗೆ ವೇದಿಕೆಯ ಮೇಲೆ ಗೌರವಿಸಲಾಗುತ್ತದೆ. ಪ್ರತಿ ಪೋಷಕರು ತಮ್ಮ ಮಕ್ಕಳೊಂದಿಗೆ ವೇದಿಕೆಯೇರಿ ಗೌರವ ಸ್ವೀಕರಿಸುತ್ತಾರೆ ಹಾಗೆಯೇ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ತಾವು ಗಳಿಸಿದ ಬಹುಮಾನಗಳನ್ನು ಜೊತೆಯಾಗಿಯೇ ಪಡೆಯುತ್ತಾರೆ.

ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರವೂ ಮಹತ್ವದ್ದು ಎನ್ನುವ ನೆಲೆಯಲ್ಲಿ ಅವರ ಕೊಡುಗೆಯನ್ನೂ ಗೌರವಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಈ ವರ್ಷದ ಕಾರ್ಯಕ್ರಮಕ್ಕೆ *ಹೊನಲು* ಎಂದು ಹೆಸರಿಡಲಾಗಿದೆ.”ಸಿಂಗಾರ, ಬೆಳಕು, ಲಾಲಿತ್ಯ, ಬಣ್ಣ, ಕಲರವ, ನಲಿವು,ಸೊಬಗು” ಇವೆಲ್ಲವೂ ಈ ಹಿಂದೆ ಬೇರೆ ಬೇರೆ ವರ್ಷಗಳಲ್ಲಿ ಇದೇ ಮಾದರಿಯಲ್ಲಿ ನಡೆಸಲಾದ ಶಾಲಾ ಮಕ್ಕಳ ಹಬ್ಬದ ಕಾರ್ಯಕ್ರಮಗಳ ಹೆಸರುಗಳು. ಸಾಮಾನ್ಯವಾಗಿ ನವೆಂಬರ್ ತಿಂಗಳ ಯಾವುದಾದರೊಂದು ದಿನದಂದು ಈ ಕಾರ್ಯಕ್ರಮ ನಡೆಯುತ್ತದೆ.

Leave a Reply

Your email address will not be published. Required fields are marked *