ಉಡುಪಿ: ಈಗಾಗಲೇ ರಾಜ್ಯದ ಹಲವು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಗುರುತಿಸಿ ಘೋಷಿಸಲಾಗಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದು ರೈತರಲ್ಲಿ ಬೇಸರ ಮೂಡಿಸಿದೆ ಎಂದು ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಕಾರವಾರ ಉಸ್ತುವಾರಿ ಸುಜಯ್ ಪೂಜಾರಿ ತಿಳಿಸಿದ್ದಾರೆ.
ಬ್ರಹ್ಮಾವರ ತಾಲೂಕು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಅನೇಕ ರೈತರು ಮಳೆ ಹಾಗೂ ನೈಸರ್ಗಿಕ ನೀರಿನ ಮೂಲಗಳ ಮೇಲೆ ಅವಲಂಬಿತರಾಗಿದ್ದಾರೆ. ತಾಲೂಕಿನಲ್ಲಿ ಹೊಳೆಗಳು ಹಾಗೂ ಇತರ ಜಲಮೂಲಗಳಿವೆ ಎಂಬ ಕಾರಣಕ್ಕೆ ಕೃಷಿಗೆ ನೀರಿನ ಸಮಸ್ಯೆ ಇಲ್ಲ ಎಂದು ನಿರ್ಧರಿಸಿ ಬರಪೀಡಿತ ಪ್ರದೇಶದ ಪಟ್ಟಿಯಿಂದ ತಾಲೂಕನ್ನು ಹೊರಗಿಡುವುದು ಸರಿಯಾದ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.
ರೈತರ ವಾಸ್ತವ ಪರಿಸ್ಥಿತಿ, ಬೆಳೆ ನಷ್ಟ, ಮಳೆಯ ಪ್ರಮಾಣ, ಕೃಷಿ ಚಟುವಟಿಕೆಗಳ ಮೇಲಾದ ಪರಿಣಾಮ ಹಾಗೂ ಗ್ರಾಮವಾರು ಪರಿಸ್ಥಿತಿಯನ್ನು ಪರಿಗಣಿಸಿ ವೈಜ್ಞಾನಿಕ ಮತ್ತು ಸಮಗ್ರ ಸಮೀಕ್ಷೆ ನಡೆಸಬೇಕು. ಸಮರ್ಪಕ ಸಮೀಕ್ಷೆ ನಡೆಸದೆ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡಲಾಗಿದ್ದರೆ, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಸುಜಯ್ ಪೂಜಾರಿ ಒತ್ತಾಯಿಸಿದ್ದಾರೆ.2023ರ ಕರ್ನಾಟಕ ಸರ್ಕಾರದ ಹೆಚ್ಚುವರಿ ಬರ ಪರಿಹಾರ ದಾಖಲೆಗಳಲ್ಲಿ ಬ್ರಹ್ಮಾವರವನ್ನು “Moderate” (ಮಧ್ಯಮ) ಬರ ಎಂದು ದಾಖಲಿಸಲಾಗಿದ್ದ ಉದಾಹರಣೆಯೂ ಇದೆ ಎಂದು ಅವರು ತಿಳಿಸಿದ್ದಾರೆ.
“ರೈತರ ಸಂಕಷ್ಟವನ್ನು ಕೇವಲ ಕಾಗದದ ಮೇಲಿನ ಅಂಕಿ-ಅಂಶಗಳ ಆಧಾರದ ಮೇಲೆ ನಿರ್ಧರಿಸಬಾರದು. ಸ್ಥಳೀಯ ಮಟ್ಟದಲ್ಲಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಬ್ರಹ್ಮಾವರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಬೇಕು.
”ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಥಳ ಪರಿಶೀಲನೆ ಮತ್ತು ಸಮಗ್ರ ಸಮೀಕ್ಷೆ ನಡೆಸಿ, ಬ್ರಹ್ಮಾವರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.ಸರ್ಕಾರ ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ, ರೈತರ ಹಿತದೃಷ್ಟಿಯಿಂದ ಮುಂದಿನ ಹೋರಾಟದ ರೂಪುರೇಷೆ ಕುರಿತು ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುಜಯ್ ಪೂಜಾರಿ ತಿಳಿಸಿದ್ದಾರೆ.















Leave a Reply