ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜನ ದಂಗೆ ಏಳುವ ಮುನ್ನ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡುವುದು ಸೂಕ್ತ: ಡಾ. ಆನಂದ ಕುಮಾರ್

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡಿದ್ದು, ಇವರ ಪಾಪದ ಕೊಡ ತುಂಬಿದೆ. ಜನ ದಂಗೆ ಏಳುವ ಮುನ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸುವುದು ಬಿಟ್ಟರೆ ಅವರಿಗೆ ಅನ್ಯ ಮಾರ್ಗವಿಲ್ಲ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.

ಜ್ಞಾನೇಶ್ ಕುಮಾರ್ ಇರಲಿ, ಬೇರೆ ಯಾರೇ ಮುಖ್ಯ ಚುನಾವಣಾ ಆಯುಕ್ತರಾಗಿರಲಿ, ವ್ಯಕ್ತಿಗಿಂತ ದೊಡ್ಡದು ಚುನಾವಣಾ ಆಯೋಗ. ಚುನಾವಣಾ ಆಯೋಗಕ್ಕಿಂತ ದೊಡ್ಡದು ಸಂವಿಧಾನ. ಸಂವಿಧಾನಕ್ಕಿಂತ ದೊಡ್ಡದು ಜನರ ಮತದಾನದ ಹಕ್ಕು. ಜನರ ಮತಾಧಿಕಾರ ಕಸಿದಿರುವ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ ಪ್ರಾಯಶ್ಚಿತ ಮಾಡಿಕೊಳ್ಳುವುದು ಸೂಕ್ತ ಎಂದಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗ ಕೇವಲ ಚುನಾವಣೆ ನಡೆಸುವ ಕಚೇರಿಯಲ್ಲ. ಅದು ಜನರ ಮತದಾನದ ಹಕ್ಕಿನ ಕಾವಲುಗಾರ. ಆ ಕಾವಲುಗಾರನ ಮೇಲೆಯೇ ಅನುಮಾನ ಮೂಡಿದಾಗ ಅಗ್ನಿ ಪರೀಕ್ಷೆ ಎದುರಿಸಲೇಬೇಕು. ಅಕ್ರಮ ಬೆಳಕಿಗೆ ಬಂದು ಮೂರು ದಿನ ಕಳೆದಿದ್ದು, ಇನ್ನೂ ಸುದ್ದಿಗೋಷ್ಠಿ ಕರೆದು ಸತ್ಯಾಸತ್ಯತೆಯನ್ನು ಬಹಿರಂಗಪಡಿಸದೇ ಇರುವುದನ್ನು ನೋಡಿದರೆ ಆರೋಪಗಳೆಲ್ಲವೂ ಸತ್ಯವಾಗಿವೆ. ಆಯೋಗ ಸ್ಪಷ್ಟ, ದಾಖಲೆ ಆಧಾರಿತವಾಗಿ ಸಾರ್ವಜನಿಕವಾಗಿ ಉತ್ತರ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ. ಮತದಾರನ ಮತದ ಮೇಲೆ ಅನುಮಾನ ಮೂಡಿದ ಕ್ಷಣದಿಂದಲೇ ಪ್ರಜಾಪ್ರಭುತ್ವದ ಮೇಲೆ ಅನುಮಾನ ಆರಂಭವಾಗುತ್ತದೆ. ಆ ಮತದಾರನ ಹೆಸರೇ ಮತದಾರರ ಪಟ್ಟಿಯಿಂದ ಕಾಣೆಯಾಗಿಬಿಟ್ಟರೆ, ಚುನಾವಣೆ ಎನ್ನುವುದು ಕೇವಲ ಒಂದು ದಿನದ ಮತದಾನ ಪ್ರಕ್ರಿಯೆಯಾಗಿ ಉಳಿಯುತ್ತದೆ. ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾದರೆ, ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯೂ ಪ್ರಶ್ನೆಗೆ ಒಳಗಾಗುತ್ತದೆ. ಇದು ಕೇವಲ ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯವೇ? ಅಥವಾ ದೇಶದ ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆಯ ಕುರಿತು ದೊಡ್ಡ ಪ್ರಶ್ನೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಚುನಾವಣಾ ಆಯೋಗವೇ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹತ್ತು ತಿಂಗಳಲ್ಲಿ 14 ಬಾರಿ ಮುಖ್ಯ ಚುನಾವಣಾ ಆಯುಕ್ತರ ತೀರ್ಮಾನಗಳನ್ನು ಪ್ರಶ್ನಿಸಿದ್ದಾರೆ. ಒಂದೇ ದಿನ ನಾಲ್ಕು ಪತ್ರಗಳನ್ನು ಬರೆದಿದ್ದಾರೆ. ಚುನಾವಣಾ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ತೀರ್ಮಾನಗಳ ವಿರುದ್ಧ ಅಸಮ್ಮತಿಯ ಪತ್ರಗಳ ಮೂಲಕ ತಮ್ಮ ಬಂಡಾಯ ಸೂಚಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಮೂವರು ಆಯುಕ್ತರಲ್ಲಿ ಮೊದಲಿಗರು ಮಾತ್ರ. ಉಳಿದ ಇಬ್ಬರಿಗೆ ಇರುವ ಅಧಿಕಾರವೇ ಅವರಿಗೂ ಇದೆ. ಹೀಗಾಗಿ ತೀರ್ಮಾನ ಕೈಗೊಳ್ಳುವ ವಿಧಾನ, ಬಹುಮತದ ನಿರ್ಧಾರಗಳು, ಆಂತರಿಕ ಚರ್ಚೆಗಳು ಮತ್ತು ದಾಖಲಾದ ಭಿನ್ನಾಭಿಪ್ರಾಯಗಳ ಕುರಿತು ಸಾರ್ವಜನಿಕ ಚರ್ಚೆ ಅನಿವಾರ್ಯವಾಗಿದೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮುಂದೆ ಇರುವ ದೊಡ್ಡ ಸವಾಲು ವಿರೋಧ ಪಕ್ಷಗಳ ಟೀಕೆಯನ್ನು ಎದುರಿಸುವುದಲ್ಲ. ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸುವುದಾಗಿದೆ. ಚುನಾವಣಾ ಆಯೋಗದ ಅಧಿಕೃತ ನಿಲುವು ಏನೇ ಇರಲಿ, ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಸಂಸ್ಥೆಯ ಘನತೆ ಕಡಿಮೆಯಾಗುವುದಿಲ್ಲ. ಪಾರದರ್ಶಕತೆ ಸಂಸ್ಥೆಯ ಮೇಲಿನ ನಂಬಿಕೆಯನ್ನು ಬಲಪಡಿಸುತ್ತದೆ. ಇದು ವ್ಯಕ್ತಿಯ ಪ್ರಶ್ನೆಯಲ್ಲ, ಸಂಸ್ಥೆಯ ಪ್ರಶ್ನೆ. ಆದ್ದರಿಂದ ಚುನಾವಣಾ ಆಯೋಗದ ಮೇಲೆ ಯಾವುದೇ ಆರೋಪ ಬಂದಾಗ ಅದನ್ನು ಕೇವಲ “ವಿರೋಧ ಪಕ್ಷದ ರಾಜಕೀಯ ಆರೋಪ” ಎಂದು ತಳ್ಳಿಹಾಕುವುದು ಸರಿಯಲ್ಲ ಎಂದಿದ್ದಾರೆ.

ಆರೋಪಗಳಿದ್ದರೆ ತನಿಖೆಯಾಗಬೇಕು. ದಾಖಲೆಗಳಿದ್ದರೆ ಸಾರ್ವಜನಿಕಗೊಳಿಸಬೇಕು. ಆಕ್ಷೇಪಣೆಗಳಿದ್ದರೆ ಅವುಗಳಿಗೆ ಉತ್ತರ ನೀಡಬೇಕು. ತಪ್ಪುಗಳಿದ್ದರೆ ಸರಿಪಡಿಸಬೇಕು. ಅರ್ಹ ಮತದಾರರ ಹೆಸರು ಅಳಿಸಲ್ಪಟ್ಟಿದ್ದರೆ ಮರುಸ್ಥಾಪಿಸಬೇಕು. ಜ್ಞಾನೇಶ್ ಕುಮಾರ್ ಚುನಾವಣಾ ಆಯುಕ್ತರಾದ ನಂತರ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಅಕ್ರಮಗಳು ನಡೆದಿವೆ. ಲೋಕಸಭೆ ಪ್ರತಿಪಕ್ಷ ನಾಯಕರಾದ ರಾಹುಲ್‌ ಗಾಂಧಿ ಈ ಬಗ್ಗೆ ಸಮಗ್ರವಾಗಿ ವೋಟ್‌ ಚೋರಿಯನ್ನು ಬಹಿರಂಗಪಡಿಸಿದ್ದಾರೆ.

ತಾವು ಮಹಾರಾಷ್ಟ್ರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಎನ್.ಸಿ.ಪಿ ಮತ್ತು ಶಿವಸೇನೆ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ರಾಜಕೀಯ ವಿಶ್ಲೇಷಕರು ಮತ್ತಿತರರು ಭವಿಷ್ಯ ನುಡಿದಿದ್ದರು. ಆದರೆ ಫಲಿತಾಂಶದಲ್ಲಿ ಹೀನಾಯ ಸೋಲಾಗಿದೆ. ಕಾಂಗ್ರೆಸ್‌ ಮೈತ್ರಿಕೂಟವನ್ನು ಪರಾಭವಗೊಳಿಸಲು ಚುನಾವಣಾ ಆಯೋಗವನ್ನು ಕೇಂದ್ರದ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಂಡಿತ್ತು ಎಂಬುದಕ್ಕೆ ಇದೀಗ ಪುರಾವೆ ದೊರೆತಿದೆ ಎಂದು ಡಾ. ಆನಂದ ಕುಮಾರ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *