ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೈನಿಕರ ಬಗ್ಗೆ ಮನದ ಮಾತು ಹಂಚಿಕೊಂಡ ಪೊದಾರ್ ಇಂಟರ್‌ ನ್ಯಾಷನಲ್ ಸ್ಕೂಲ್‌ನ ಪುಟಾಣಿ ಮಕ್ಕಳು

ಉಡುಪಿ : ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್ (CBSE)ನ ಪುಟಾಣಿ ಮಕ್ಕಳು ಸೆ.16ರಂದು ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಕಚೇರಿಗೆ ಭೇಟಿ ನೀಡಿ, ಮಾಜಿ ಸೈನಿಕರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು. ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳು ಸೈನಿಕರ ಕುರಿತು ತಮ್ಮ ಮನದ ಮಾತುಗಳನ್ನು ಪತ್ರಗಳ ಮೂಲಕ ಬರೆದು ತಂದಿರುವುದು ವಿಶೇಷವಾಗಿತ್ತು.

ಕೆಲವು ಮಕ್ಕಳು ತಮ್ಮ ಪತ್ರಗಳಲ್ಲಿ ಭಾರತೀಯ ಸೈನಿಕರು, ದೇಶದ ಸೇನೆ ಹಾಗೂ ಭಾರತಾಂಬೆಯ ಕುರಿತು ತಮ್ಮ ಅಭಿಮಾನ ಮತ್ತು ಗೌರವವನ್ನು ವ್ಯಕ್ತಪಡಿಸಿದ್ದರು.ಸುಮಾರು ಒಂದು ಗಂಟೆ 30 ನಿಮಿಷಗಳ ಕಾಲ ಮಕ್ಕಳೊಂದಿಗೆ ಸಂವಾದ ನಡೆಸಿದ ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು, ಮಕ್ಕಳೊಂದಿಗೆ ಸಮಯ ಕಳೆದಿದ್ದು ಅತ್ಯಂತ ಸಂತೋಷದ ಅನುಭವವಾಗಿದೆ ಎಂದು ತಿಳಿಸಿದರು.

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ಸದಸ್ಯರು, ಕಠಿಣ ಪರಿಶ್ರಮ, ಉತ್ತಮ ನಡವಳಿಕೆ ಹಾಗೂ ಉನ್ನತ ಕನಸುಗಳನ್ನು ಹೊಂದಿ, ಅವುಗಳನ್ನು ನನಸು ಮಾಡಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ತಂದೆ-ತಾಯಿ, ಗುರುಗಳು ಹಾಗೂ ಹಿರಿಯರನ್ನು ಗೌರವಿಸುವುದರ ಜೊತೆಗೆ ಭಾರತೀಯ ಸೇನೆ ಮತ್ತು ಸೈನಿಕರನ್ನು ಗೌರವಿಸುವ, ದೇಶವನ್ನು ಪ್ರೀತಿಸುವ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಮುಂದುವರಿದು, ಭಾರತದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು. ಜೀವನದಲ್ಲಿ ಉನ್ನತ ಹುದ್ದೆಗಳನ್ನು ಗಳಿಸಿದರೂ ಸಮಾಜದ ಕಟ್ಟಕಡೆಯ ಪ್ರಜೆಯನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ವಿವರಿಸಲಾಯಿತು.

ಸೈನಿಕರು, ಭಾರತೀಯ ಸೇನೆ ಹಾಗೂ ಭಾರತಮಾತೆಯನ್ನು ಗೌರವಿಸುವಂತಹ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *