ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಾನುವಾರುಗಳಿಂದ ಮನುಷ್ಯರಿಗೆ ಹರಡುವ ರೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

ಉಡುಪಿ: ವಿವಿಧ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಮಣಿಪಾಲದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಹೇಳಿದರು. ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ರೇಬಿಸ್ ರೋಗವು ಸಾಮಾನ್ಯವಾಗಿ ಸೋಂಕಿತ ಪ್ರಾಣಿಗಳ ಕಚ್ಚುವಿಕೆ ಅಥವಾ ಅವುಗಳ ಲಾಲಾರಸವು ಗಾಯದ ಸಂಪರ್ಕಕ್ಕೆ ಬರುವುದರಿಂದ ಹರಡುತ್ತದೆ.

ದನಗಳಲ್ಲಿಯೂ ರೇಬಿಸ್ ಕಾಣಿಸಿಕೊಳ್ಳಬಹುದು. ಆದರೆ ರೇಬಿಸ್ ಸೋಂಕಿತ ದನದ ಹಾಲನ್ನು ಕುದಿಸಿ ಕುಡಿಯುವುದರಿಂದ ರೇಬಿಸ್ ಹರಡುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.ಹುಚ್ಚು ಹಿಡಿದಿರುವ ನಾಯಿ ನೀರಿಗೆ ಹೆದರುತ್ತದೆ ಎಂಬುದು ಸಾಮಾನ್ಯವಾಗಿ ಇರುವ ತಪ್ಪು ಕಲ್ಪನೆಯಾಗಿದೆ.

ಹೈಡ್ರೋಫೋಬಿಯಾ (ಜಲಭೀತಿ) ರೇಬಿಸ್‌ನ ಒಂದು ಪ್ರಮುಖ ನರಸಂಬಂಧಿ ಲಕ್ಷಣವಾಗಿದ್ದು, ಮನುಷ್ಯರಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ ಎಂದು ಅವರು ವಿವರಿಸಿದರು.ಬೆಕ್ಕು ಅಥವಾ ನಾಯಿ ಕಚ್ಚಿದರೆ ಅಥವಾ ಪರಚಿದರೆ ಗಾಯವನ್ನು ತಕ್ಷಣವೇ ಸಾಕಷ್ಟು ನೀರು ಮತ್ತು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ಬಳಿಕ ತಕ್ಷಣ ವೈದ್ಯಕೀಯ ಸಲಹೆ ಪಡೆದು ಅಗತ್ಯವಿದ್ದಲ್ಲಿ ರೇಬಿಸ್ ನಿರೋಧಕ ಲಸಿಕೆ ಹಾಗೂ ಟೆಟನಸ್‌ (TT) ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

ಜೂನೋಟಿಕ್ ರೋಗಗಳು ಎಂದರೆ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ನೈಸರ್ಗಿಕವಾಗಿ ಹರಡಬಹುದಾದ ಸಾಂಕ್ರಾಮಿಕ ರೋಗಗಳಾಗಿವೆ. ಕುದುರೆಗಳಲ್ಲಿ ಗ್ಲಾಂಡರ್ಸ್, ದನಗಳಲ್ಲಿ ಬ್ರುಸೆಲ್ಲೋಸಿಸ್, ಮೇಕೆ ಸೇರಿದಂತೆ ವಿವಿಧ ಪ್ರಾಣಿಗಳಿಂದ ಆಂಥ್ರಾಕ್ಸ್ ಹಾಗೂ ಬೆಕ್ಕುಗಳೊಂದಿಗೆ ಸಂಬಂಧಿಸಿದ ಟಾಕ್ಸೋಪ್ಲಾಸ್ಮೋಸಿಸ್‌ ಮುಂತಾದ ರೋಗಗಳ ಕುರಿತು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ರೇಬಿಸ್ ಮತ್ತು ಜೂನೋಟಿಕ್ ರೋಗಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಶುವೈದ್ಯೆ ಡಾ. ಪುಷ್ಪ ಜಿ. ಮಾಲಗಿತ್ತಿಮಠ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಸೇರುವಂತೆ ಪ್ರೋತ್ಸಾಹಿಸಿದರು.ಕಾಲೇಜಿನ ಪ್ರಾಚಾರ್ಯರಾದ ಸಿ. ಸುರೇಶ್ ತುಂಗ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್‌ನ ಸಂಯೋಜಕರಾದ ಪದ್ಮ ಎ. ಆಚಾರ್ಯ, ಉಪನ್ಯಾಸಕಿಯರಾದ ವೀಣಾ ಜಿ. ಪ್ರಭು, ಲಕ್ಷ್ಮಣನ್ ಹಾಗೂ ಪಾವನ ಕಶ್ಯಪ್ ಉಪಸ್ಥಿತರಿದ್ದರು. ಇಕೋ ಕ್ಲಬ್‌ನ ಕಾರ್ಯದರ್ಶಿ ಸಾನ್ವಿ ವಿ. ಸ್ವಾಗತಿಸಿದರು. ಅಮಿರತ್ ಕಾರ್ಯಕ್ರಮ ನಿರೂಪಿಸಿದರು. ಬಿಂದಿಯಾ ವಂದಿಸಿದರು.

Leave a Reply

Your email address will not be published. Required fields are marked *