ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟು; ಅದ್ಧೂರಿ ಸನ್ಮಾನ ವೈದ್ಯನಾಗುವ ಕನಸಿನತ್ತ ಅರ್ಜುನ್ ಹೆಜ್ಜೆ; ಸಾಧನೆಗೆ ಕನ್ನೊಳ್ಳಿ ಗ್ರಾಮಸ್ಥರ ಹರ್ಷ

ಬಾಗಲಕೋಟೆ: ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಕನ್ನೊಳ್ಳಿ ಗ್ರಾಮದ ಅಪ್ಪಾಸಾಬ ಕೊಕರೆ ಅವರ ಪುತ್ರ ಅರ್ಜುನ್ ಅಪ್ಪಾಸಾಬ ಕೊಕರೆ ಅವರು ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಎಂ.ವಿ.ಜೆ. ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಕಾಲೇಜಿಗೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಆಯ್ಕೆಯಾಗಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅರ್ಜುನ್ ಅವರು ತಮ್ಮ ಪರಿಶ್ರಮ, ಶ್ರದ್ಧೆ ಹಾಗೂ ವಿದ್ಯಾಭ್ಯಾಸದ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಸಾಧನೆ ಕನ್ನೊಳ್ಳಿ ಗ್ರಾಮದ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಉನ್ನತ ಗುರಿ ಸಾಧಿಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವಂತಾಗಿದೆ.

ಅರ್ಜುನ್ ಅವರ ವೈದ್ಯಕೀಯ ಶಿಕ್ಷಣದ ಪ್ರವೇಶವನ್ನು ಮೆಚ್ಚಿದ ಕನ್ನೊಳ್ಳಿ ಗ್ರಾಮದ ಗ್ರಾಮಸ್ಥರು, ಯುವಕರು ಹಾಗೂ ಹಿರಿಯರು ಅವರ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಜ್ಞಾನ ಹಾಗೂ ಕೌಶಲ್ಯವನ್ನು ಪಡೆದು, ಬಡವರು ಮತ್ತು ಗ್ರಾಮೀಣ ಜನರಿಗೆ ನೆರವಾಗುವ ಸೇವಾ ಮನೋಭಾವದ ವೈದ್ಯರಾಗಿ ಹೊರಹೊಮ್ಮಬೇಕು ಎಂದು ಶುಭ ಹಾರೈಸಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಧನೆ ಮಾಡುವ ಮೂಲಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅರ್ಜುನ್ ಅವರ ಯಶಸ್ಸು ಕುಟುಂಬದ ಹೆಮ್ಮೆಯ ಜೊತೆಗೆ ಇಡೀ ಕನ್ನೊಳ್ಳಿ ಗ್ರಾಮದ ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಣಪ್ಪ ಮೋಹಿತೆ, ಅಪ್ಪಾಸಾಬ ಕೊಕರೆ, ಉಮೇಶ್ ಮೋಹಿತೆ, ಉಮೇಶ್ ಜಾಧವ್, ರಾಜು ಮೋಹಿತೆ, ಅಶೋಕ ಬಿರಾದಾರ, ಸಂತೋಷ ಕೊಕರೆ ಸೇರಿದಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಅರ್ಜುನ್ ಅವರಿಗೆ ಅಭಿನಂದನೆ ಸಲ್ಲಿಸಿದರು.ಅರ್ಜುನ್ ಕೊಕರೆ ಅವರ ಈ ಸಾಧನೆಗೆ ಕನ್ನೊಳ್ಳಿ ಗ್ರಾಮದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಅವರ ವೈದ್ಯಕೀಯ ಶಿಕ್ಷಣದ ಭವಿಷ್ಯ ಉಜ್ವಲವಾಗಲಿ ಎಂಬ ಹಾರೈಕೆಗಳು ಕೇಳಿಬಂದವು.

Leave a Reply

Your email address will not be published. Required fields are marked *