ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪುನರ್‌ಸ್ಮೃತಿ–25’: 25 ವರ್ಷಗಳ ಬಳಿಕ ಗುರು–ಶಿಷ್ಯರ ಪುನರ್‌ಮಿಲನ

ಬ್ರಹ್ಮಾವರ: ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕಾಲೇಜಿನಲ್ಲಿ 2000–01ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪುನರ್‌ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ‘ಪುನರ್‌ಸ್ಮೃತಿ–25’ ಸೆಪ್ಟೆಂಬರ್ 13ರಂದು ಬ್ರಹ್ಮಾವರದ ಸಿಟಿ ಸೆಂಟರ್‌ನ ಸಿಂಧೂರ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರು SMS ಬ್ರಹ್ಮಾವರ ಡಾ. ವೈ. ರವೀಂದ್ರನಾಥ ರಾವ್ ವಹಿಸಿದ್ದರು. 25 ವರ್ಷಗಳ ಬಳಿಕ ತಮ್ಮ ಗುರುಗಳು ಹಾಗೂ ಸಹಪಾಠಿಗಳನ್ನು ಭೇಟಿಯಾದ ಹಳೆಯ ವಿದ್ಯಾರ್ಥಿಗಳು, ಇದು ತಮ್ಮ ಬದುಕಿನ ಅವಿಸ್ಮರಣೀಯ ಹಾಗೂ ಸಂಭ್ರಮದ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು.

ಗುರುವಂದನೆ ಸ್ವೀಕರಿಸಿದ ಉಪನ್ಯಾಸಕರು, “ಮಾತನಾಡುವ ಕಲೆಯಲ್ಲಿ ಗುರುವನ್ನೇ ಮೀರಿಸುವ ನಮ್ಮ ಶಿಷ್ಯರನ್ನು ಕಂಡು ಸಂತೋಷವಾಗಿದೆ. ನಮ್ಮ ವಿದ್ಯಾರ್ಥಿಗಳು ನಮಗಿಂತಲೂ ಹೆಚ್ಚಿನ ಸಾಧನೆ ಮಾಡಿದಾಗ ಯಾವುದೇ ಮತ್ಸರವಿಲ್ಲದೆ ಸಂತೋಷಪಡುವವರು ನಾವು” ಎಂದು ಹೇಳಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜಿನ ಪ್ರಸ್ತುತ ಪ್ರಾಂಶುಪಾಲ ಪ್ರೊ. ರೋಬರ್ಟ್ ರೋಡ್ರಿಗಸ್ ಮಾತನಾಡಿ, ಕಾಲೇಜಿನ ಬಾಗಿಲು ಸದಾ ಹಳೆಯ ವಿದ್ಯಾರ್ಥಿಗಳಿಗೆ ತೆರೆದಿರುತ್ತದೆ ಎಂದು ಹೇಳಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮಗೆ ಬೋಧಿಸಿದ ಉಪನ್ಯಾಸಕರನ್ನು ಗೌರವಿಸಿ ಗುರುವಂದನೆ ಸಲ್ಲಿಸಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳಾದ ರಾಘವೇಂದ್ರ ಶೆಟ್ಟಿಗಾರ್, ಪ್ರಶಾಂತ್ ಶೆಟ್ಟಿ, ಆಶಾ, ರಂಜಿತಾ ಹಾಗೂ ಜಯಚಂದ್ರ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತಮ್ಮ ಸಾಧನೆಗೆ ಕಾಲೇಜಿನಲ್ಲಿ ಪಡೆದ ಶಿಕ್ಷಣ ಹಾಗೂ ಗುರುಗಳ ಮಾರ್ಗದರ್ಶನವೂ ಪ್ರಮುಖ ಕಾರಣವಾಗಿದೆ ಎಂದು ಅವರು ಸ್ಮರಿಸಿದರು.

ನಂತರ ಹಳೆಯ ವಿದ್ಯಾರ್ಥಿಗಳು ಕಾಲೇಜು ಆವರಣಕ್ಕೆ ಭೇಟಿ ನೀಡಿ, ತಾವು ವ್ಯಾಸಂಗ ಮಾಡಿದ ತರಗತಿ ಕೊಠಡಿಗಳು, ಆಟದ ಮೈದಾನ ಹಾಗೂ ಕಾಲೇಜಿನ ಪರಿಸರವನ್ನು ವೀಕ್ಷಿಸಿದರು. ಈ ಮೂಲಕ ತಮ್ಮ ಕಾಲೇಜು ದಿನಗಳ ಹಲವು ನೆನಪುಗಳನ್ನು ಮೆಲುಕು ಹಾಕಿದರು. ಕಾಲೇಜಿನ ಅಭಿವೃದ್ಧಿಗೆ ಕೊಡುಗೆಯಾಗಿ ಪ್ರಾಂಶುಪಾಲರಿಗೆ ಕಿರು ಕಾಣಿಕೆಯಾಗಿ ಹಣವನ್ನು ಹಸ್ತಾಂತರಿಸಿದರು. ವಿಜಯಲಕ್ಷ್ಮಿ ಸ್ವಾಗತಿಸಿದರು.

ಸುನೀತಾ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತಿ ವಂದಿಸಿದರು. ಜೀವನ್ ರೋಡ್ರಿಗಸ್, ಶುಭಾ ಪ್ರಶಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.

Leave a Reply

Your email address will not be published. Required fields are marked *