ಪದವಿ ಹಂತದಲ್ಲಿ ಕಠಿಣ ಪರಿಶ್ರಮ ಶಿಸ್ತು ಸಂಯಮವನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಪಠ್ಯ ವಿಷಯಗಳ ಜೊತೆಗೆ ಆಧುನಿಕ ಜಗತ್ತಿನ ಅಗತ್ಯ ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ವಿದ್ಯಾಭ್ಯಾಸದ ಹಂತದಲ್ಲಿ ಸನ್ನಡತೆ ಮತ್ತು ಶಿಷ್ಟಾಚಾರಗಳನ್ನು ರೂಢಿಸಿಕೊಳ್ಳಬೇಕು.
ಅಂತಹ ವಿದ್ಯಾರ್ಥಿಗಳು ತಮ್ಮ ಮನೆ, ಸಮಾಜ ಮತ್ತು ದೇಶದ ಆಸ್ತಿಯಾಗುತ್ತಾರೆ. ವಿಭಿನ್ನ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಈ ಕಾಲೇಜು ಉನ್ನತ ಸ್ಥಾನ ಪಡೆದಿದೆ ಎಂದು ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿಯ ಸ್ಥಾಪಕ ಅಧ್ಯಕ್ಷರಾದ ಸಿಎ ರಾಜೇಂದ್ರ ಕಿಣಿ ತಿಳಿಸಿದರು.ಶಂಕರನಾರಾಯಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ, ಗೋಳಿಯಂಗಡಿ, ಲಯನ್ಸ್ ಕ್ಲಬ್ ‘ಯುವಶಕ್ತಿ ಮತ್ತು ‘ಯುವ ಧ್ವನಿ ಇವರ ಸಹಯೋಗದಲ್ಲಿ ಸಂಘಟಿಸಿದ ಸರಣಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ನ ಅಧ್ಯಕ್ಷೆ ಲಯನ್ ಶ್ರೀಮತಿ ಚಂದ್ರಿಕಾ ಲಯನ್ಸ್ ಕ್ಲಬ್ ನ ವೈಶಿಷ್ಟ್ಯತೆ ಮತ್ತು ಉದ್ದೇಶಗಳನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು, ವೈವಿಧ್ಯಮಯ ವಿಷಯಗಳನ್ನು ಕಲಿಯಲು ಸಹಕಾರಿಯಾಗಲು ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ.
ಭವಿಷ್ಯದ ದೃಷ್ಟಿಕೋನದಿಂದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದ ಸಿಎ ರಾಜೇಂದ್ರ ಕಿಣಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸರಣಿ ತರಬೇತಿಯ ಮೊದಲು ವಿಶೇಷ ತರಬೇತುದಾರರಾಗಿ ಆಝಾದ್ ಅಹಮ್ಮದ್ ಪ್ರಥಮ ಚಿಕಿತ್ಸೆ ಎನ್ನುವ ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.ಸಹಾಯಕ ಪ್ರಾಧ್ಯಾಪಕ ಸಚಿನ್.ಎಸ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಭಾವನಾ ಮತ್ತು ತಂಡ ಪ್ರಾರ್ಥಿನೆಗೈದರು. ಕನ್ನಡದ ಸಹಾಯಕ ಪ್ರಾಧ್ಯಾಪಕ ಗಂಗಾಧರ್ ಆರ್. ಎಚ್ ವಂದಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದಿವ್ಯಾ ಎಂ.ಎಸ್, ಆಂತರಿಕ ಗುಣಮಟ್ಟ ಮತ್ತು ಭರವಸಾ ಕೋಶದ ಸಂಚಾಲಕಿ ಡಾ. ನಳಿನಶ್ರೀ ಆರ್. ಎನ್, ಲಯನ್ಸ್ ಕ್ಲಬ್ ನ ಉಪಾಧ್ಯಕ್ಷ ಮುಸ್ತಾಕ್ ಅಹಮ್ಮದ್, ಕಾರ್ಯದರ್ಶಿ ಶಾಲಿನಿ ಪ್ರೇಮ್ ಕುಮಾರ್, ಕೋಶಾಧಿಕಾರಿ ಭಾರ್ಗವಿ.ಪಿ.ಭಟ್, ಸದಸ್ಯ ಸತೀಶ್ ಆಚಾರ್ಯ ಉಳ್ಳೂರು, ಕಾರ್ಯಕ್ರಮದ ಸಂಘಟಕ ಕೆ.ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು.












Leave a Reply