ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಕ್ಕಳ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಪ್ರಧಾನ : ಡಾ. ಶೇಖರ. ಬಿ

ಆಧುನಿಕ ಕಾಲಘಟ್ಟದಲ್ಲಿ ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಹೆಚ್ಚು ಮಹತ್ವ ಕೊಟ್ಟು ದಾರಿತಪ್ಪದಂತೆ ಶಿಕ್ಷಣವನ್ನು ಪೂರ್ಣಗೊಳಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಕೊಡುಗೆ ಅಪಾರ ಎಂದು ಉಡುಪಿಯ ನಿವೃತ್ತ ಪ್ರಾಧ್ಯಾಪಕ ಡಾ. ಶೇಖರ. ಬಿ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ನಡೆದ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬಿಎ, ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳ ಪೋಷಕರ ಸಭೆ ಮತ್ತು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸುತ್ತಾ ಹೇಳಿದರು.

ಗ್ರಾಮೀಣ ಭಾಗದಲ್ಲಿ ಇರುವ ಈ ಕಾಲೇಜು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಧ್ಯಯನ ಮಾಡಿ ಉತ್ತಮ ಉದ್ಯೋಗ ಪಡೆದು ತಮ್ಮ ಪೋಷಕರ ಗೌರವ ಹೆಚ್ಚಿಸಬೇಕು. ಅತಿಯಾದ ಮೊಬೈಲ್ ಬಳಕೆ ಮತ್ತು ಅನಗತ್ಯ ಸ್ನೇಹಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಗಳನ್ನು ತಿಳಿಸಿದರು. ಕಾಲೇಜು ಪೋಷಕರ ಸಮಿತಿಯ ಅಧ್ಯಕ್ಷ ಶ್ರೀ ರವೀಂದ್ರ ಶೆಟ್ಟಿ ಮಾತನಾಡಿ ಪೋಷಕರು ಮಕ್ಕಳ ಕೈಗೆ ಹೆಚ್ಚು ಸಮಯ ಮೊಬೈಲ್ ನೀಡಬಾರದು. ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡಿ ಕುಟುಂಬದ ಆಸ್ತಿಯನ್ನಾಗಿ ಮಾಡಬೇಕೆಂದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಲೆಫ್ಟಿನೆಂಟ್ ವಸಂತ. ಜಿ ಮಕ್ಕಳ ಶಿಕ್ಷಣದ ಅಭಿವೃದ್ಧಿಯಲ್ಲಿ ಪೋಷಕರ ಜವಾಬ್ದಾರಿ ಎಂಬ ವಿಷಯ ಕುರಿತು ಮಾತನಾಡಿದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ. ನಳಿನಶ್ರೀ ಆರ್. ಎನ್ ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಗಳ ಕುರಿತ ಸಂಕ್ಷಿಪ್ತ ವರದಿಯನ್ನು ನೀಡಿದರು. ಕು. ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿ ಶ್ರೀ ಸಚಿನ್ ಎಸ್ ಸ್ವಾಗತಿಸಿದರು. ಶ್ರೀ. ಪ್ರಸ್ತುತ ವೈ.ಎನ್ ವಂದಿಸಿದರು. ಡಾ. ಗಂಗಾಧರ ಆರ್. ಎಚ್. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *