ಕೋಟ: ಕೋಟದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವತಿಯಿಂದ ಮಾರ್ಚ್ 1ರಂದು ಕೋಟದ ಗಾಂಧಿ ಮೈದಾನದಲ್ಲಿ ವೈಭವದ ಏಕಃಪವಿತ್ರ ನಾಗಮಂಡಲ ಸೇವೆ ಜರುಗಲಿದೆ.
ಈ ಹಿನ್ನೆಲೆಯಲ್ಲಿ ಮಂಡಲೋತ್ಸವದ ಮಂಟಪ ಹಾಗೂ ಇತರೇ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಊರ ಜನರು, ಸ್ವಯಂ ಸೇವಕರು, ಈ ದೇವತಾಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.
ಈ ಮಂಡಲೋತ್ಸವದಲ್ಲಿ ಸುಮಾರು 30,000 ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಭಕ್ತಾದಿಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಆಡಳಿತ ಮಂಡಳಿ ಸಕಲ ಸವಲತ್ತುಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ಫೆ.28ರ ಶನಿವಾರ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಾಯಶ್ಚಿತ್ತ ತಿಲಹೋಮ, ನವಕಲಶಾಧಿವಾಸ ಹೋಮ, ವಟು ಬ್ರಾಹ್ಮಣ ಆರಾಧನೆ, ಶ್ರೀ ಅಮೃತೇಶ್ವರಿ ಮತ್ತು ಪರಿವಾರ ದೇವರಿಗೆ ಪ್ರತ್ಯೇಕ ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪ್ರಸಾದ ವಿತರಣೆ, ಸಂಜೆ ನಾಗದೇವರ ಸನ್ನಿಧಿಯಲ್ಲಿ ವಾಸ್ತು ಪೂಜಾ ಬಲಿ, ರಾಕ್ಷೆವಿಘ್ನ ಹೋಮ, ಆಶ್ಲೇಷ ಬಲಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಾರ್ಚ್ 1ರಂದು ಪೂರ್ವಾಹ್ನ 7.00 ಗಂಟೆಗೆ ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಪವಮಾನ ಹೋಮ, ಕೂಷ್ಮಾಂಡ ಹೋಮ, ತಿಲ ಹೋಮ, ಪಂಚವಿoಶತಿ ದ್ರವ್ಯ ಕಲಶ ಪೂರ್ವಕ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ಗಾಯತ್ರಿ ಜಪ, ವೇದ ಪಾರಾಯಣ, ಬ್ರಹ್ಮಕಲಶಾಭಿಷೇಕ, ಕಲ್ಪೋಕ್ತ ಪೂಜೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಮಹಾಮಂಗಳಾರತಿ, ನಾಗಸಂದರ್ಶನ ಮಹಾಪ್ರಸಾದ ವಿರತಣೆ ಜರುಗಿ ನಂತರ 12.30ರಿಂದ ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7.00 ಗಂಟೆಗೆ ನಾಗನಿಗೆ ಹಾಲಿಟ್ಟು ಸೇವೆ ನಡೆದು 8. 30ರಿಂದ ನಾಗಮಂಡಲೋತ್ಸವ ಜರುಗಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮಣೂರು ಮಧುಸೂದನ ಬಾಯರಿ ಮತ್ತು ಬಳಗದವರ ನೇತೃತ್ವದಲ್ಲಿ ನಡೆಯಲಿದೆ. ಮಂಡಲೋತ್ಸವದಲ್ಲಿ ಪಾತ್ರಿಗಳಾಗಿ ಕಾರ್ಕಡ ವೆಂಕಟರಮಣ ಹೊಳ್ಳ ಮತ್ತು ವೈದ್ಯರಾಗಿ ರಾಘವೇಂದ್ರ ವೈದ್ಯ ಮತ್ತು ಬಳಗ ಇರಲಿದ್ದಾರೆ. ಮಾರ್ಚ್ 1ರಂದು ಉತ್ಸವದ ಪ್ರಯುಕ್ತ ಸಂಜೆ 5.00 ಗಂಟೆಗೆ ವಿದ್ವಾನ್ ಸಗ್ರಿ ವೇದವ್ಯಾಸ ಐತಾಳ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಂಜೆ 6.00 ಗಂಟೆಗೆ ಸಾಲಿಗ್ರಾಮದ ನಟರಾಜ ನೃತ್ಯ ನಿಕೇತನ ತಂಡದವರಿoದ ಭರತನಾಟ್ಯ, ಅಪರಾಹ್ನ ಭಾಗ್ಯೇಶ್ವರಿ ಮಯ್ಯ ಇವರ ನೇತೃತ್ವದಲ್ಲಿ ಛಾಯಾ ತರಂಗಿಣಿ ಸಂಗೀತ ಶಾಲೆ ಇವರಿಂದ ಶತಕಂಠ ಗಾಯನ ಕಾರ್ಯಕ್ರಮ ನೆರವೇರಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ. ಸಿ. ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Leave a Reply