ಮಸ್ಕತ್, ಅ. 1: ಕರ್ನಾಟಕದ ರಕ್ತದಾನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ಸಮಾಜಸೇವಕ ಹಾಗೂ ರಕ್ತದಾನ ಪ್ರೇರಕ ಸತೀಶ್ ಸಾಲ್ಯಾನ್ ಅವರು ಮಸ್ಕತ್‌ಗೆ ಆಗಮಿಸಿದ ಸಂದರ್ಭದಲ್ಲಿ ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು–ಮಸ್ಕತ್, ಓಮಾನ್ ಘಟಕದ ಅಧ್ಯಕ್ಷ ಕಟಪಾಡಿ ಶಿವಾನಂದ ಕೋಟ್ಯನ್, ಸದಸ್ಯರಾದ ಶತೀಶ್ ಬಾರ್ಕೂರು, ಇಮ್ಯಾನುಯೆಲ್ ದಿವಾಕರ್ ಹಾಗೂ ಮಸ್ಕತ್ ಮೂಗವೀರಸ್ ಅಧ್ಯಕ್ಷ ಪದ್ಮಾಕರ ಮೆಂಡನ್, ಸದಸ್ಯರಾದ ಶೇಷ ಕಾಂಚನ್ ಮತ್ತು ದಿನಕರ್ ಸುವರ್ಣ ಕೋಟೆ ಅವರು ಸತೀಶ್ ಸಾಲ್ಯಾನ್ ಅವರನ್ನು ಬರಮಾಡಿಕೊಂಡರು.

ಅಕ್ಟೋಬರ್ 2ರಂದು ಮಸ್ಕತ್‌ನ ಘಾಲಾ ಹೆಲ್ತ್ ಸೆಂಟರ್‌ನಲ್ಲಿ ನಡೆಯಲಿರುವ 10ನೇ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ‘ಜೀವಧಾರೆ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಸತೀಶ್ ಸಾಲ್ಯಾನ್ ಅವರು ಮಸ್ಕತ್‌ಗೆ ಆಗಮಿಸಿದ್ದಾರೆ. ಸತೀಶ್ ಸಾಲ್ಯಾನ್ ಅವರು ಇದುವರೆಗೆ 53 ಬಾರಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆ, ರಕ್ತದಾನ ಶಿಬಿರಗಳ ಆಯೋಜನೆ, ರಕ್ತದಾನಿಗಳ ಸಂಪರ್ಕ ಹಾಗೂ ಜನಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರಕಿಸಿಕೊಡುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ನೀಡುವ ಮಾನವೀಯ ಕಾರ್ಯಗಳಲ್ಲಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಕಡಲಾಚೆಯ ಕನ್ನಡಿಗರು ಹಮ್ಮಿಕೊಂಡಿರುವ ರಕ್ತದಾನ ಸೇವಾ ಕಾರ್ಯದಲ್ಲಿ ಕರ್ನಾಟಕದಿಂದ ಆಗಮಿಸಿರುವ ಸತೀಶ್ ಸಾಲ್ಯಾನ್ ಅವರ ಭಾಗವಹಿಸುವಿಕೆ ಓಮಾನ್‌ನ ಸ್ವಯಂಪ್ರೇರಿತ ರಕ್ತದಾನ ಚಳವಳಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಕಾರ್ಯಕ್ರಮದ ಆಯೋಜಕ ಕಟಪಾಡಿ ಶಿವಾನಂದ ಕೋಟ್ಯನ್ ತಿಳಿಸಿದ್ದಾರೆ.
ರಾಷ್ಟ್ರೀಯ ರಕ್ತದಾನ ದಿನ ಹಾಗೂ ಗಾಂಧಿ ಜಯಂತಿಯ ಅಂಗವಾಗಿ ಅಕ್ಟೋಬರ್ 2ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ‘ಜೀವಧಾರೆ’ ರಕ್ತದಾನ ಶಿಬಿರ ನಡೆಯಲಿದೆ. ಓಮಾನ್‌ನ ವಿವಿಧ ಭಾಗಗಳಿಂದ ರಕ್ತದಾನಿಗಳು, ವೈದ್ಯರು, ಸಮಾಜಸೇವಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಕಳೆದ ಒಂದು ದಶಕದ ರಕ್ತದಾನ ಸೇವಾ ಪಯಣ ಹಾಗೂ ರಕ್ತದಾನದ ಮಹತ್ವವನ್ನು ದಾಖಲಿಸುವ ‘ಜೀವಧಾರೆ – The Ray of Life’ ಮಾಹಿತಿ ಪುಸ್ತಕವನ್ನು ಅನಾವರಣಗೊಳಿಸಲಾಗುವುದು.












Leave a Reply