ತೆಕ್ಕಟ್ಟೆ, ಸೆ. 26: ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ–ತೆಕ್ಕಟ್ಟೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುರೇಶ್ ಬೆಟ್ಟಿನ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಪ್ರಗತಿಪರ ಸೇವಾ ಸಂಸ್ಥೆ (ರಿ.), ಮಂಡ್ಯ ಇವರು ಆಯೋಜಿಸಿದ್ದ 22ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ 2026–27ರಲ್ಲಿ ಭಾಗವಹಿಸಿದ 7ನೇ ತರಗತಿಯ ಅಪರ್ಣ ಪ್ರಭು, 6ನೇ ತರಗತಿಯ ಅದ್ವಿತ್ ಯು.ಜಿ., 5ನೇ ತರಗತಿಯ ಮನ್ವಿತ್ ಕಾರಂತ್, 4ನೇ ತರಗತಿಯ ರೋಷನ್ ಜೆ., 3ನೇ ತರಗತಿಯ ಧೃತಿಶ್ರೀ, 2ನೇ ತರಗತಿಯ ರಿಷಾ, 1ನೇ ತರಗತಿಯ ರಿಧಿ ಎನ್. ಹಾಗೂ ಯುಕೆಜಿಯ ಚಿನ್ಮಯಿ ಎಸ್. ಐತಾಳ್ ಅವರನ್ನು ಅಭಿನಂದಿಸಲಾಯಿತು.
ಅದೇ ರೀತಿ, ವಿದ್ಯಾ ಭಾರತಿ ಶಿಕ್ಷಾ ಸಂಸ್ಥಾನ, ಕರ್ನಾಟಕ ಆಯೋಜಿಸಿದ್ದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 7ನೇ ತರಗತಿಯ ಯಷಿ ಹಾಗೂ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ 6ನೇ ತರಗತಿಯ ಭವಿಷ್ ಎಸ್. ಪೂಜಾರಿ, ಸಮುದ್ಯತಾ ವೈ.ಪಿ. ಮತ್ತು 7ನೇ ತರಗತಿಯ ಪ್ರಭವ್ ಎ. ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಶ್ರೀ ಸುರೇಶ್ ಬೆಟ್ಟಿನ್, “ಪ್ರತಿಯೊಬ್ಬ ಮಗುವಿನಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಅವಕಾಶ ಹಾಗೂ ಪ್ರೋತ್ಸಾಹ ನೀಡಿದಾಗ ಮಕ್ಕಳು ತಮ್ಮ ಸಾಮರ್ಥ್ಯವನ್ನು ಸಾಧನೆಯಾಗಿ ರೂಪಿಸಿಕೊಳ್ಳುತ್ತಾರೆ. ಶಿಕ್ಷಣದ ಜೊತೆಗೆ ಕಲೆ, ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿಯೂ ಮಕ್ಕಳನ್ನು ಬೆಳೆಸುವುದು ನಮ್ಮ ಸಂಸ್ಥೆಯ ಉದ್ದೇಶ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಇಂದು ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳ ಸಾಧನೆ ಇತರ ಮಕ್ಕಳಿಗೂ ಪ್ರೇರಣೆಯಾಗಲಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಶ್ರೀ ಕಮಲಾಕ್ಷ ಪೈ, ಸದಸ್ಯರಾದ ಶ್ರೀ ಸುರೇಶ ಆಚಾರ್ಯ, ಮುಖ್ಯೋಪಾಧ್ಯಾಯ ಶ್ರೀ ಹರ್ಷ ಕೋಟೇಶ್ವರ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.












Leave a Reply