ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚಡಗ ಕಾದಂಬರಿ ಪ್ರಶಸ್ತಿಪ್ರದಾನ : ಒಂದು ವರದಿ ಸಾಹಿತ್ಯ ಇರುವುದು ಮನರಂಜನೆಗೆ ಮಾತ್ರವಲ್ಲ – ಬೆಳಗೋಡು

ಓದುಗನ ಅರಿವಿನ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಒಂದು ಕಾದಂಬರಿಯ ಮೂಲಕ ನಿರೀಕ್ಷಿಸುವುದು ಸಮಂಜಸವೇ ಎಂಬ ಪ್ರಶ್ನೆಗೆ ಉತ್ತರವಾಗಿ, ಅದ್ಭುತ ವೇಗದಿಂದ ಜಗತ್ತು ಬದಲಾಗುತ್ತಿರುವಾಗ ಸೃಜನಶೀಲ ಸಾಹಿತ್ಯವೂ ಅರಿವನ್ನು ಸದಾ ಹೊಸತಾಗಿಸುವ ಮಾಧ್ಯಮವಾಗಬೇಕು ಎಂಬುದನ್ನು ನಾವು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶ್ರೀಮತಿ ರಮ್ಯ ಎಸ್. ರವರ ವರ್ಣತಂತು ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

‘ನಮ್ಮ ಶರೀರದ ಹೊರಗಿನ ಮತ್ತು ಒಳಗಿನ- ರಚನೆ, ಕಾರ್ಯವೈಖರಿ, ಆರೋಗ್ಯ, ಕಾಯಿಲೆ ಇವೆಲ್ಲವನ್ನು ನಿರ್ಧರಿಸುವುದು ನಮ್ಮ ವಂಶವಾಹಿಗಳು. ನಮ್ಮಲ್ಲಿರುವ ಮತ್ತು ನಮಗೆ ಬರಬಹುದಾದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಪೂರ್ವ ಮಾಹಿತಿಯನ್ನು ವಂಶವಾಹಿಗಳು ತಮ್ಮಲ್ಲಿ ಅಡಗಿಸಿಕೊಂಡಿರುತ್ತವೆ. ನಮ್ಮ ಬುದ್ದಿ, ಪೆದ್ದುತನ, ಹಿಂಸಾಪ್ರವೃತ್ತಿ, ಪ್ರತಿಕ್ರಿಯೆ, ಲೈಂಗಿಕ ಒಲವುಗಳು – ಯಾವುದರಿಂದ ನಮ್ಮನ್ನು ನಾವು ನಮ್ಮತನವೆಂದು ಗುರುತಿಸುತ್ತೇವೋ, ಅದೆಲ್ಲಕ್ಕೂ ನಮ್ಮ ವಂಶವಾಹಿಗಳೇ ಕಾರಣ. ವರ್ಣತಂತುಗಳಲ್ಲಿ (ಪೂರ್ವಿಕರ) ದೈಹಿಕ ಲಕ್ಷಣಗಳು ಮಾತ್ರವಲ್ಲದೆ, ಅವರಿಂದ ಬಂದಿರುವ ಕಾಯಿಲೆ, ಆರೋಗ್ಯದ ಲಕ್ಷಣಗಳು ಕೂಡಾ ಸೇರುತ್ತವೆ. ಕೆಲವು ಲಕ್ಷಣಗಳನ್ನು ಎಕ್ಸ್ ವರ್ಣ ಹೊತ್ತು ತಂದರೆ ತಂದರೆ ಕೆಲವನ್ನು ವೈ-ವರ್ಣತಂತು ಹೊತ್ತಿರುತ್ತವೆ. ಅಪ್ಪ ಅಥವಾ ಅಮ್ಮ ಈ ಆನುವಂಶಿಕ ಧಾತುವಿನ ವಾಹಕರು (ಕ್ಯಾರಿಯರ್) ಆಗಿರುತ್ತಾರೆ.’ ಎಂಬ ತಳಿವಿಜ್ಞಾನದ ಗಹನ ರಹಸ್ಯವನ್ನು ಒಂದು ನವೋದಯ ಸಂದರ್ಭದ ನಿರೂಪಣೆಯ ಕಥೆಯಾಗಿ ಹೇಳುವ ‘ವರ್ಣತಂತು’ ಓದುಗನ ಬುದ್ಧಿಮತ್ತೆಯನ್ನು ಸಮಕಾಲೀನಗೊಳಿಸುವ ಪ್ರಶಂಸಾರ್ಹ ಕೆಲಸವನ್ನು ಪ್ರಯತ್ನಿಸಿದೆ.

ಕಾದಂಬರಿಕಾರ್ತಿ ರಮ್ಯ ಎಸ್. ರವರು ಈ ಕಾದಂಬರಿಯಲ್ಲಿ ನೀಡುವ ಜೈವಿಕವಿಜ್ಞಾನದ ವಿವರಗಳು ಜೀವಸೃಷ್ಟಿಯ ನಿಗೂಢಗಳನ್ನು ಬಿಚ್ಚಿಡುವುದು ಮಾತ್ರವಲ್ಲ, ದೇಹಾರೋಗ್ಯ ರಕ್ಷಣೆಯ ಕುರಿತಂತೆ ಹೊಸ ಅರಿವನ್ನು ಆಗುಮಾಡಿಕೊಡುತ್ತದೆ. ವರ್ಣತಂತು ಕಾದಂಬರಿ ನಮಗೆಯಾಕೆ ಪ್ರಸ್ತುತವಾಗುತ್ತದೆಂದರೆ, ಬದುಕು ಸವಾಲುಗಳನ್ನು ಒಡ್ಡುತ್ತಾ ಹೋದಹಾಗೆ ವಿಜ್ಞಾನವು ಹೊಸ ಉತ್ತರಗಳನ್ನು ಹುಡುಕಿಕೊಡುತ್ತಾ ಹೋಗುವ ಚೋದ್ಯವನ್ನು ಈ ಕಾದಂಬರಿ ನಮ್ಮೆದುರು ತೆರೆದಿಡುತ್ತದೆ.

ತನ್ಮೂಲಕ ಸೃಷ್ಟಿಯ ಕೌತುಕತೆಯ ಬಗ್ಗೆ ಓದುಗರನ್ನು ಅಧ್ಯಯನಾಸಕ್ತರನ್ನಾಗಿಸುವ ಕೆಲಸವನ್ನೂ ಮಾಡುತ್ತದೆ, ಎಂದಾದರೆ ಸಾಹಿತ್ಯದಿಂದ ಬೇರೇನನ್ನು ನೀವು ನಿರೀಕ್ಷಿಸುತ್ತೀರಿ? ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ವರ್ಣತಂತು ಕಾದಂಬರಿಯು ಮಾಡಿದಂತಿದೆ ಎಂದು ಬೆಳಗೋಡು ರಮೇಶ ಭಟ್ಟರು ಅಭಿಪ್ರಾಯಪಟ್ಟರು.

ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ, ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ| ಕಾರಂತ ಸಭಾಂಗಣದಲ್ಲಿ ದಿ. ೨೭ರಂದು ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇತರರೊಡಗೂಡಿ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರು ಪುರಸ್ಕಾರವನ್ನು ಕಾದಂಬರಿಯ ಲೇಖಕಿ ಶ್ರೀಮತಿ ರಮ್ಯ ಎಸ್. ರವರಿಗೆ ಪ್ರದಾನಿಸಿ ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡುತ್ತಾ ಯಾವುದೇ ಬಣಕ್ಕೆ, ಸಾಹಿತ್ಯಿಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾಪ್ರಾಯೋಜಕರು ಅಭಿನಂದನಾರ್ಹರು ಎಂದರು.

ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಚಡಗರ ಸಂಸ್ಮರಣೆಗೈದರು. ಚಡಗರ ಸುಪುತ್ರ ಬೆಂಗಳೂರಿನ ಶೇಷನಾರಾಯಣ ಚಡಗರು ಶುಭಾಶಂಸನೆಗೈದರು. ಪ್ರಶಸ್ತಿ ಪ್ರಾಯೋಜಕ  ಕೋಟೇಶ್ವರದ ಡಾ| ಎನ್. ಭಾಸ್ಕರ ಆಚಾರ್ಯರು ಪ್ರಸ್ತಾವನೆಯೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ಶ್ರೀ ಪಿ. ಶ್ರೀಪತಿ ಹೇರ್ಳೆಯವರು ವಂದನಾರ್ಪಣೆಯನ್ನೂ, ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾ ಪ್ರಾರ್ಥನೆಯನ್ನೂ ಗೈದ ಈ ಕಾರ್ಯಕ್ರಮಕ್ಕೆ ನಿರೂಪಕರಾಗಿ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀ ಮಂಜುನಾಥ ಉಪಾಧ್ಯರು ಸಹಕರಿಸಿದರು. ‘ಸ್ಥಿತಿ ಗತಿ’ ಪ್ರಕಾಶಕಿ ಡಾ| ಸಬಿತಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *