ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ರಚಿಸಿದ ಪಾಂಗಾಳ ಕರುಣಾಕರ ಶೆಟ್ಟಿಯವರ ಜೀವನ ಆಧಾರಿತ ಕೃತಿ ‘ಕರುಣಾಸಾಗರ’ ಬಿಡುಗಡೆ ಸಮಾರಂಭವು ಇತ್ತೀಚೆಗೆ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಮಾಜಸೇವಕ ಪಾಂಗಾಳ ಕರುಣಾಕರ ಶೆಟ್ಟಿ ಅವರ ಜೀವನಯಾನವನ್ನು ಚಿತ್ರಿಸುವ ಈ ಕೃತಿಯನ್ನು ಉಡುಪಿ ತುಳು ಕೂಟದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ರೆವರೆಂಡ್ ಕಿಶೋರ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ನ ರವಿರಾಜ್ ಎಚ್.ಪಿ. ಅವರು ಮಾತನಾಡಿ ಈ ಕೃತಿ ಮೌಲ್ಯಾಧಾರಿತ ಜೀವನಕ್ಕೆ ಪ್ರೇರಣೆಯಾಗಿದೆ ಎಂದರು.
ಲೇಖಕ ಪಾಂಗಾಳ ವಿಶ್ವನಾಥ್ ಶೆಟ್ಟಿ ಅವರು ಕೃತಿರಚನೆಯ ಅನುಭವಗಳನ್ನು ಹಂಚಿಕೊಂಡು ಇಂತಹ ಮೌಲ್ಯಯುತ ಸಾಹಿತ್ಯವನ್ನು ಸಮಾಜಕ್ಕೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.ಅವರು ಬರೆದು ರಾಗ ಸಂಯೋಜನೆ ಮಾಡಿದ ಕವನವನ್ನು ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಡಿದರು. ಪುಸ್ತಕದ ಮುಖಪುಟ ವಿನ್ಯಾಸವನ್ನು ಮಾಡಿದ, 8 ನೇ ತರಗತಿಯಲ್ಲಿ ಓದುತ್ತಿರುವಾಗಲೇ 4 ಪುಸ್ತಕಗಳನ್ನು ಬರೆದ ಯುವ ಬರಹಗಾರ್ತಿ ಉನ್ನತಿ ಎಸ್.ಪೂಜಾರಿಯವರನ್ನು ಗುರುತಿಸಿ ಗೌರವಿಸಲಾಯಿತು.
ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ಅವರ ಹಿನ್ನೆಲೆ ಧ್ವನಿಯಲ್ಲಿ ಸಂಕಲನ ಗೊಂಡ ಕರುಣಾ ಸಾಗರ ಕರುಣಾಕರ ಶೆಟ್ಟಿಯವರ ಕುರಿತಾದ ಕಿರು ಸಾಕ್ಷ್ಯ ಚಿತ್ರವನ್ನು ತೋರಿಸಲಾಯಿತು.ತನ್ನ ಜೀವನದ ಹಾದಿಯಲ್ಲಿ ಸಿಕ್ಕ ತಿರುವುಗಳ ಜೊತೆ ಜೊತೆಗೆ ಕಟ್ಟಿಕೊಂಡ ಬದುಕಿನ ಬಹುಪಾಲು ಸದ್ವಿನಿಯೋಗದ ಫಲ ಈ ಪುಸ್ತಕ ಎನ್ನುವುದಾಗಿ ಕರುಣಾಕರ ಶೆಟ್ಟಿಯವರು ತಮ್ಮ ಮನದಾಳದ ಮಾತುಗಳ ಮೂಲಕ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಲೇಖಕ ವಿಶ್ವನಾಥ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ್ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾ ಕರುಣಾಕರ ಶೆಟ್ಟಿ ಹಾಗೂ ಸಾಹಿತ್ಯಾಸಕ್ತರು, ಗಣ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶ್ವೇತಾ ಶ್ರೀನಿವಾಸ್ ಸ್ವಾಗತಿಸಿ, ಯಶ್ ಕರುಣಾಕರ ಶೆಟ್ಟಿ ವಂದಿಸಿ, ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ್ ಕಾರ್ಯಕ್ರಮವನ್ನು ನಿರೂಪಿಸಿದರು.












Leave a Reply