ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಸ್ಕತ್‌ನಲ್ಲಿ ಅಕ್ಟೋಬರ್ 2ರಂದು ‘ಜೀವಧಾರೆ’ ಬೃಹತ್ ರಕ್ತದಾನ ಶಿಬಿರ

ಮಸ್ಕತ್, ಸೆ. 30: ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಓಮಾನ್ ಘಟಕ ಹಾಗೂ ಮಾನ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನದ ನೇತೃತ್ವದಲ್ಲಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಹಯೋಗದೊಂದಿಗೆ 10ನೇ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ‘ಜೀವಧಾರೆ’ ಅಕ್ಟೋಬರ್ 2ರಂದು ಮಸ್ಕತ್‌ನ ಘಾಲಾ ಹೆಲ್ತ್ ಸೆಂಟರ್‌ನಲ್ಲಿ ನಡೆಯಲಿದೆ.

ಗಾಂಧಿ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿರುವ ಈ ಶಿಬಿರವು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಓಮಾನ್‌ನ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ರಕ್ತದ ಮೂಲಕ ಜೀವದಾನ ನೀಡುವ ಮಾನವೀಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ.

ಕಳೆದ ಸುಮಾರು ಒಂದು ದಶಕದಿಂದ ಮಸ್ಕತ್‌ನಲ್ಲಿ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ತಂಡವು ಈ ಬಾರಿ 10ನೇ ವರ್ಷದ ಶಿಬಿರವನ್ನು ವಿಶೇಷವಾಗಿ ಆಯೋಜಿಸಿದೆ. ಈ ಸೇವಾ ಪಯಣದ ನೆನಪಿಗಾಗಿ ರಕ್ತದಾನದ ಮಹತ್ವ, ಇತಿಹಾಸ, ಆರೋಗ್ಯ ಜಾಗೃತಿ ಹಾಗೂ ಕಳೆದ ಹತ್ತು ವರ್ಷಗಳ ಸೇವಾ ಚಟುವಟಿಕೆಗಳನ್ನು ಒಳಗೊಂಡ ‘ಜೀವಧಾರೆ – The Ray of Life’ ವಿಶೇಷ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕದ ಖ್ಯಾತ ರಕ್ತದಾನ ಪ್ರೇರಕ ಹಾಗೂ ಸಮಾಜಸೇವಕ ಶ್ರೀ ಸತೀಶ್ ಸಾಲ್ಯಾನ್, ಉಡುಪಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸ್ವತಃ 53 ಬಾರಿ ರಕ್ತದಾನ ಮಾಡಿರುವ ಸತೀಶ್ ಸಾಲ್ಯಾನ್ ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ತುರ್ತು ರಕ್ತದ ವ್ಯವಸ್ಥೆ, ರಕ್ತದಾನ ಶಿಬಿರಗಳ ಆಯೋಜನೆ ಹಾಗೂ ರಕ್ತದಾನ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಓಮಾನ್‌ನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರುನಾಡಿನ ವೈದ್ಯರು, ವಿವಿಧ ಕನ್ನಡ–ತುಳು ಸಂಘಟನೆಗಳ ಪ್ರತಿನಿಧಿಗಳು, ಸಮಾಜಸೇವಕರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

“ರಕ್ತದಾನವು ಕೇವಲ ದಾನವಲ್ಲ; ಇನ್ನೊಂದು ಜೀವಕ್ಕೆ ನೀಡುವ ಅಮೂಲ್ಯ ಭರವಸೆ” ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ಬೃಹತ್ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ರಕ್ತದಾನಿಗಳು ಭಾಗವಹಿಸಿ ಮಾನವೀಯ ಸೇವೆಗೆ ಕೈಜೋಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.— ಕರ್ನಾಟಕ ಜಾನಪದ ಪರಿಷತ್ತು, ಮಸ್ಕತ್–ಓಮಾನ್ ಘಟಕ
ಮಾನ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಷ್ಠಾನ

Leave a Reply

Your email address will not be published. Required fields are marked *