ಬಾಗಲಕೋಟೆ : ಬಾಹುಸಾಹೇಬ ಮಹಾರಾಜರ ಹೇಳಿದಂತೆ, ನಾಮ ತೆಗೆದುಕೊಳ್ಳಬೇಕು, ನಿಯಮಗಳನ್ನು ಪಾಲಿಸಬೇಕು. ಸದ್ಗುರುವಿಗೆ ಶರಣಾಗಬೇಕು, ಸದ್ಗುರುವಿನಿಂದ ಉಪದೇಶ ಪಡೆದುಕೊಳ್ಳಬೇಕು ಹಾಗೂ ಸದ್ಗುರುಗಳು ಹೇಳಿದ ಮಾರ್ಗದಲ್ಲಿ ನಡೆಯಬೇಕು. ಎಂದು ಇಂಚಗೇರಿ ಮಠದ ಸ.ಸ. ಪ್ರಭುಜಿ ಮಹಾರಾಜರು ಹೇಳಿದರು.
ಸಾವಳಗಿ ಸಮೀಪದ ಬಾಡಗಿ ಗ್ರಾಮದಲ್ಲಿ ಸಿದ್ದಪುರುಷ, ಮಹಾನ್ ಧನ್ವಂತರಿ ಶ್ರೀ ಸ.ಸ. ಚನ್ನಸಂಗಮೇಶ್ವರ ಮಹಾರಾಜರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಸುವಿಚಾರ ಹಾಗೂ ರಥೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂತ–ಶರಣರು ತಮ್ಮ ಬದುಕಿನ ಮೂಲಕ ಸಮಾಜಕ್ಕೆ ಸನ್ಮಾರ್ಗ ತೋರಿಸಿದ್ದಾರೆ.
ಅವರ ವಚನ ಹಾಗೂ ತತ್ವಗಳನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದ್ಗುರುವೇ ನಮ್ಮ ಬದುಕಿನ ಎಲ್ಲ ಆಧಾರ ಎಂದು ತಿಳಿದುಕೊಂಡು, ಅವರು ತೋರಿಸಿದ ಮಾರ್ಗದಲ್ಲಿ ನಡೆಯಬೇಕು. ಭಕ್ತಿ, ಶ್ರದ್ಧೆ, ಆಸಕ್ತಿ ಮತ್ತು ಪ್ರೇಮದಿಂದ ಸದ್ಗುರುವಿನ ಸೇವೆ ಮಾಡಬೇಕು. ಸದ್ಗುರುವೇ ನಮ್ಮ ಬದುಕಿನ ಎಲ್ಲ ಆಧಾರ ಎಂದು ತಿಳಿದುಕೊಂಡು, ಅವರು ತೋರಿಸಿದ ಮಾರ್ಗದಲ್ಲಿ ನಡೆಯಬೇಕು ಎಂದರು.

ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗೂರುಜಿ ಮಾತನಾಡಿ ಅವರು ಹಿಂದಿನ ಕಾಲದ ಮಹನೀಯರು ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ, ಶಾಸ್ತ್ರ–ಪುರಾಣಗಳ ಆಳವಾದ ಅಧ್ಯಯನ ನಡೆಸದಿದ್ದರೂ, ಗುರುವಿನ ಮೇಲೆ ಅಖಂಡವಾದ ವಿಶ್ವಾಸವನ್ನಿಟ್ಟುಕೊಂಡು ಆಧ್ಯಾತ್ಮಿಕ ಸಾಧನೆಯ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದರು. ಗುರುವಿನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು, ಭಕ್ತಿ ಹಾಗೂ ಶ್ರದ್ಧೆಯಿಂದ ನಡೆದುಕೊಂಡಾಗ ಬದುಕಿನಲ್ಲಿ ಬದಲಾವಣೆ ಸಾಧ್ಯ.
ಗುರುಗಳು ತೋರಿಸುವ ಮಾರ್ಗವನ್ನು ನಂಬಿಕೆಯಿಂದ ಅನುಸರಿಸುವುದೇ ನಿಜವಾದ ಶರಣಾಗತಿ ತಮ್ಮ ಜೀವನದಲ್ಲಿ ಸಾವಿರಾರು ಅಂತರಜಾತಿ ವಿವಾಹಗಳನ್ನು ನೆರವೇರಿಸಿದ ಪ್ರಸಂಗವನ್ನು ವಿವರಿಸಿದ ಅವರು, ಸಮಾಜದಲ್ಲಿ ಜಾತಿ–ಧರ್ಮದ ಗೋಡೆಗಳನ್ನು ನಿರ್ಮಿಸುವುದಕ್ಕಿಂತ ಅವುಗಳನ್ನು ಮೀರಿ ಮಾನವೀಯ ಸಂಬಂಧಗಳಿಗೆ ಆದ್ಯತೆ ನೀಡಬೇಕು, ಒಮ್ಮೆ ಇಂಚಗೇರಿ ಮಠಕ್ಕೆ ಬಂದ ಸಂದರ್ಭದಲ್ಲಿ, “ಸ್ವಾಮೀಜಿ, ಇಷ್ಟೊಂದು ಮದುವೆಗಳನ್ನು ಮಾಡಿಸುತ್ತೀರಿ; ನಿಮಗೆ ಏನು ಸಿಗುತ್ತದೆ?” ಎಂದು ಯಾರೋ ಪ್ರಶ್ನಿಸಿದಾಗ, ಅದಕ್ಕೆ ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲದೆ ಸಮಾಜದಲ್ಲಿ ಪ್ರೀತಿ, ಸಮಾನತೆ ಮತ್ತು ಸೌಹಾರ್ದ ಬೆಳೆಸುವುದೇ ಉದ್ದೇಶ ಎಂದು ಹೇಳಿದರು.
ಅಥಣಿ ಮಾಜಿ ಶಾಸಕ ಶಹಾಜಾನಂದ ಡೊಂಗರಗಾಂವ ಮಾತನಾಡಿ, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯ ಆಶಯದಂತೆ ದೇಶದ ಗಡಿಯಲ್ಲಿ ನಿಂತು ರಾಷ್ಟ್ರವನ್ನು ರಕ್ಷಿಸುತ್ತಿರುವ ಸೈನಿಕರು ಹಾಗೂ ದೇಶದ ಅನ್ನದಾತರಾದ ರೈತರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ರಕ್ಷಣೆಗೆ ಸೈನಿಕರು ಸಲ್ಲಿಸುತ್ತಿರುವ ಸೇವೆ ಹಾಗೂ ರೈತರು ದೇಶದ ಜನತೆಗೆ ಅನ್ನ ನೀಡುವ ಮೂಲಕ ಮಾಡುತ್ತಿರುವ ಸೇವೆ ಅಮೂಲ್ಯವಾದದ್ದು ಎಂದರು.
ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕರಾದ ಬಿ. ಕೆ. ಮುಧೋಳ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಾಡಗಿ ಮಠದ ಸಿದಲಿಂಗ ಸಾದು ಮಹಾರಾಜರು, ಚಿಕ್ಕಾಲಗುಂಡಿ ಮಠದ ಶಿವಶರಣಾನಂದ ಸ್ವಾಮೀಜಿ, ಕಕಮರಿ ಮಠದ ಆತ್ಮಾನಂದ ಸ್ವಾಮೀಜಿ, ಅಥಣಿ ಶಾಸಕ ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಬಾಗಲಕೋಟೆ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ನಿರ್ದೇಶಕ ಸಿದ್ಧರಾಮೇಶ್ವರ ಉಕ್ಕಲಿ, ಬಾಗಲಕೋಟೆ ಜಿಲ್ಲೆಯ ಉಪ ನಿರ್ದೇಶಕ ಮಲ್ಲನಗೌಡ ಝರೆ, ಸಿದ್ದು ಹಳ್ಳಿ, ಚನ್ನಪ್ಪ ನ್ಯಾಮಗೌಡ, ವಿಠ್ಠಲ ಮುಧೋಳ, ಗುರಪ್ಪ ನ್ಯಾಮಗೌಡ, ಮಹಾಂತೇಶ ಮಮದಾಪೂರ, ವೈದ್ಯರು, ಸೈನಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಾಜಿ ಹಾಗೂ ಹಾಲಿ ಸೈನಿಕರಿಗೆ ಸನ್ಮಾನದೇಶದ ಗಡಿ ಕಾಯುವ ಮೂಲಕ ರಾಷ್ಟ್ರದ ಭದ್ರತೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಹಾಲಿ ಹಾಗೂ ಮಾಜಿ ಸೈನಿಕರನ್ನು ಗೌರವಿಸುವ ಸನ್ಮಾನ ಸಮಾರಂಭವು ಜಾತ್ರಾ ಮಹೋತ್ಸವದ ಅಂಗವಾಗಿ ಗೌರವ ಹಾಗೂ ಹೆಮ್ಮೆಯ ವಾತಾವರಣದಲ್ಲಿ ನಡೆಯಿತು.ದೇಶಸೇವೆ ಸಲ್ಲಿಸುತ್ತಿರುವ ಹಾಗೂ ಸಲ್ಲಿಸಿ ನಿವೃತ್ತರಾದ ವೀರಯೋಧರಿಗೆ ಗೌರವ ಸಲ್ಲಿಸಿ, ಅವರ ತ್ಯಾಗ, ಸೇವೆ ಹಾಗೂ ಸಾಹಸವನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಸೈನಿಕರಿಗೆ ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು.
ರೈತನೆಂದರೆ ಕೇವಲ ಹೊಲದಲ್ಲಿ ದುಡಿಯುವವನು ಅಲ್ಲ; ಇಡೀ ಸಮಾಜಕ್ಕೆ ಅನ್ನ ನೀಡುವ ಅನ್ನದಾತ. ಬಿಸಿಲು, ಮಳೆ, ಗಾಳಿ ಎನ್ನದೆ ಮಣ್ಣಿನೊಂದಿಗೆ ಬೆವರು ಸುರಿಸಿ ಬೆಳೆ ಬೆಳೆಯುವ ರೈತನ ಬದುಕಿಗೂ ಗೌರವ ನೀಡಿ. ಮಕ್ಕಳ ಭವಿಷ್ಯಕ್ಕೆ ನೌಕರಿಯಷ್ಟೇ ಮುಖ್ಯವಲ್ಲ; ದುಡಿಮೆ, ಸ್ವಾಭಿಮಾನ, ಜವಾಬ್ದಾರಿ ಮತ್ತು ನೆಲದ ನಂಟು ಕೂಡ ಮುಖ್ಯ. ಆದ್ದರಿಂದ ಮನೆಗೆ ಹೆಣ್ಣು ಕೇಳಲು ಬಂದಾಗ, ರೈತನನ್ನೂ ಗೌರವದಿಂದ ಪರಿಗಣಿಸಿ—ರೈತನಿಗೆ ಹೆಣ್ಣು ಕೊಡಿ, ರೈತನ ಬದುಕಿಗೆ ಬೆಂಬಲವಾಗಿ ನಿಲ್ಲಿ. ಶಶಿಕಾಂತ ಗೂರುಜಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು.















Leave a Reply