ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾಪುವಿನಲ್ಲಿ ಕಾಂಗ್ರೆಸ್‌ ಬೃಹತ್ ಜಾಥಾ, ಪ್ರತಿಭಟನಾ ಸಭೆ

ಕಾಪು, ಜು. 21: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಹುಂಡಿ ಹಣದ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಟ್ರಸ್ಟಿಗಳು, ಸಿಬಂದಿ ಹಾಗೂ ಪರೋಕ್ಷವಾಗಿ ಸಹಕರಿಸಿದವರ ವಿರುದ್ಧ ಸ್ವತಂತ್ರ ತನಿಖೆ ನಡೆಸಿ ಕಠಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಸಂಜೆ ಕಾಪುವಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ಮತ್ತು ಸಭೆ ನಡೆಯಿತು.

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಮುಂಭಾಗದಿಂದ ಕಾಪು ಪೇಟೆಯವರೆಗೆ ರಾಮ ದೇವರ ಭಜನೆ ಮತ್ತು ದೊಂದಿ ಬೆಳಕಿನ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಅಯೋಧ್ಯೆ ರಾಮ ಮಂದಿರ ಸನ್ನಿಧಿಯಲ್ಲಿ ನಡೆದ ಹುಂಡಿ ಕಳವು ಹಾಗೂ ಲೂಟಿ ಮಾಡಿದ ಸತ್ಯಾಂಶ ಹೊರಬೀಳಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದು, ಇಂದು ಕಾಪು ನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ದೇವಸ್ಥಾನದ ಟ್ರಸ್ಟಿ ಗಳ ಮೂಲಕ ದೇಶದಲ್ಲಿ ದೇವಸ್ಥಾನದ ಹೆಸರಿನಲ್ಲಿ ಆಗುತ್ತಿರುವ ಅವ್ಯವಹಾರವನ್ನು ಸಹಿಸಲಾರದೆ ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡದೇ ಸುಪ್ರೀಂ ಕೋರ್ಟ್ ಸತ್ಯಾಂಶವನ್ನು ನೀಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಬಿಜೆಪಿ ಪಕ್ಷದವರು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಇಂದು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ.ಸುಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಅಯೋಧ್ಯೆಯ ರಾಮ ಮಂದಿರದಲ್ಲಿ ಆಗಿರುವ ಅವ್ಯವಹಾರ ಬಗ್ಗೆ ಕಾಪುವಿನ ಸುತ್ತಮುತ್ತಲಿನ ದೇವಸ್ಥಾನದ ಟ್ರಸ್ಟಿ ಗಳ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಕೈಜೋಡಿಸಿ ಅಯೋಧ್ಯೆಯಲ್ಲಿ ಆದ ಅವ್ಯವಹಾರವನ್ನು ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯಾಂಶ ಹೊರಬೀಳಬೇಕು ಎನ್ನುವ ನಿಟ್ಟಿನಲ್ಲಿ ಭಜನಾ ಸಂಕೀರ್ತನೆ ಯೊಂದಿಗೆ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿ ಕಾಂಗ್ರೆಸ್ ನ್ನು ಬಿಜೆಪಿ ಅವರು ಪ್ರತಿಪಾದಿಸಿದಂತಹ ರಾಮನ ವಿರೋಧಿ ಎಂಬ ರಾಜಕೀಯ ಸಿದ್ಧಾಂತವನ್ನು ಅಲ್ಲಗಳೆದು, ಕಾಂಗ್ರೆಸ್ ರಾಮನ ಸಾಂಸ್ಕೃತಿಕ, ಪೌರಾಣಿಕವನ್ನು ಚೆನ್ನಾಗಿ ಬಲ್ಲವರಾಗಿ ಯಾವತ್ತೂ ರಾಮನ ಚರಿತ್ರೆಯನ್ನು ಅನುಮಾನಿಸಿ ನಿಂದನೆ ಮಾಡಲಿಲ್ಲ ಆದರೆ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಪಕ್ಷದ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಶಿವಾಜಿ‌ ಸುವರ್ಣ, ವೈ.ಸುಧೀರ್ ಕುಮಾರ್, ಮಾಧವ ಪಾಲನ್, ಪ್ರಶಾಂತ್ ಜತ್ತನ್ನ, ನವೀನ್ ಎನ್.‌ ಶೆಟ್ಟಿ, ಸರಸು ಡಿ. ಬಂಗೇರ, ರಾಜೇಶ್ ರಾವ್ ಪಾಂಗಾಳ, ಸುನೀಲ್ ಬಂಗೇರ, ವಿಕ್ರಂ ಕಾಪು, ಅಬ್ದುಲ್ ಅಜೀಜ್, ಶಾಂತಲತಾ ಶೆಟ್ಟಿ, ಮಹಮ್ಮದ್ ನಿಯಾಝ್, ಗಣೇಶ್ ಕೋಟ್ಯಾನ್, ದೀಪಕ್ ಎರ್ಮಾಳು, ಅಖಿಲೇಶ್ ಕೋಟ್ಯಾನ್, ನಿರೀಕ್ಷಾ ಮೆಂಡನ್, ಸುಮನ್ ಬೋಳಾರ್, ಸುಧೀರ್ ಕರ್ಕೇರ, ಅಶೋಕ್ ನಾಯರಿ, ಪುರಸಭೆ ಸದಸ್ಯರು, ಮಾಜಿ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *