ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ: ವಾರಾಹಿ ನದಿ ದಂಡೆ ಕುಸಿತ – ರಿವಿಟ್‌ಮೆಂಟ್ ನಿರ್ಮಾಣಕ್ಕೆ ₹10–15 ಲಕ್ಷ ಅನುದಾನಕ್ಕೆ ಬೇಡಿಕೆ

ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾರಾಹಿ ನದಿ ದಂಡೆ ಕುಸಿತದಿಂದ ಪರಿಶಿಷ್ಟ ಜಾತಿ ಕುಟುಂಬಗಳು ಭಾರೀ ಆತಂಕದಲ್ಲಿ ಬದುಕುತ್ತಿರುವುದು ಮುಂದುವರಿದ ಬೆಳವಣಿಗೆಯಾಗಿ ಹೊರಹೊಮ್ಮಿದೆ.

ಈ ಕುರಿತಂತೆ ಮಂಜಿ ಕೋಂ ರಾಮ ಕೆಂಪಣ್ಣ ತೊಪ್ಪು ಅವರು 18-05-2026ರಂದು ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಅರ್ಜಿದಾರರು ಉಲ್ಲೇಖಿಸಿದ ಸಮಸ್ಯೆಗಳು ನಿಜವೆಂದು ದೃಢಪಟ್ಟಿದೆ.

ಆನಗಳ್ಳಿ ಗ್ರಾಮದ ವಾರಾಹಿ ನದಿ ತೀರದಲ್ಲಿ ವಾಸವಾಗಿರುವ ಸುಮಾರು ನಾಲ್ಕು ಪರಿಶಿಷ್ಟ ಜಾತಿ ಕುಟುಂಬಗಳ ಜಮೀನು ಹಾಗೂ ಮನೆಗಳಿಗೆ ಮಳೆಗಾಲದ ಪ್ರವಾಹದಿಂದ ತೀವ್ರ ಅಪಾಯ ಉಂಟಾಗಿದೆ.ಸ್ಥಳ ಪರಿಶೀಲನೆ ವರದಿಯ ಪ್ರಕಾರ, ನದಿ ದಂಡೆ ನಿರಂತರವಾಗಿ ಕೊರೆತುಹೋಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಭೂ ಕುಸಿತ ಸಂಭವಿಸಿ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

ಇದರಿಂದಾಗಿ ತುರ್ತು ಕ್ರಮವಾಗಿ ನದಿ ದಡದಲ್ಲಿ ರಿವಿಟ್‌ಮೆಂಟ್ (Revetment) ಅಥವಾ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಅತ್ಯಾವಶ್ಯಕ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಈ ಕಾಮಗಾರಿಗೆ ಅಂದಾಜು ₹10 ರಿಂದ ₹15 ಲಕ್ಷದವರೆಗೆ ವೆಚ್ಚವಾಗುವ ಸಾಧ್ಯತೆ ಇದ್ದು, ಗ್ರಾಮ ಪಂಚಾಯತಿ ನಿಧಿಯಲ್ಲಿ ಇಷ್ಟೊಂದು ಮೊತ್ತ ಲಭ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳುವಂತೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.

ಸ್ಥಳೀಯರು ಹೇಳುವಂತೆ, ಸಮಸ್ಯೆಯನ್ನು ಇನ್ನಷ್ಟು ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಮಳೆಗಾಲದಲ್ಲಿ ಮನೆಗಳು ನದಿ ಪಾಲಾಗುವ ಭೀತಿ ಹೆಚ್ಚಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳು ಶೀಘ್ರದಲ್ಲಿ ಅನುದಾನ ಮಂಜೂರು ಮಾಡಿ ಕಾಮಗಾರಿ ಪ್ರಾರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಬೆಳವಣಿಗೆಗಳಿಗಾಗಿ ನಿರೀಕ್ಷಿಸಿ…

Leave a Reply

Your email address will not be published. Required fields are marked *