ಹಿರಿಯ ಕಾಂಗ್ರೆಸ್ ಮುಖಂಡ, ಮೊಗವೀರ ಸಮುದಾಯದ ನಾಯಕ ಶಂಕರ್ ಎ. ಕುಂದರ್ ಅವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಹಲವು ವರ್ಷಗಳಿಂದ ಪಕ್ಷದ ವರಿಷ್ಠರಲ್ಲಿ ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೆ ಯಾವುದೇ ಸ್ಥಾನಮಾನ ನೀಡದೆ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಅವರ ಬೆಂಬಲಿಗರಲ್ಲಿ ವ್ಯಕ್ತವಾಗಿದೆ. ಈ ಬಾರಿಯೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದರು. ಆದರೆ ಕುಂದಾಪುರ ಮತ್ತು ಬ್ರಹ್ಮಾವರ ಭಾಗದಲ್ಲಿ ಪಕ್ಷ ಸಂಘಟನೆಗೆ ಹಲವು ವರ್ಷಗಳಿಂದ ದುಡಿದಿರುವ ಹಿರಿಯ ಮುಖಂಡ ಶಂಕರ್ ಎ ಕುಂದರ್ ಅವರನ್ನು ಕಡೆಗಣಿಸಿ, ಅವರಿಗಿಂತ ಕಿರಿಯ ವಯಸ್ಸಿನ ಹಾಗೂ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಲವರಿಗೆ ನಿಗಮ ಮಂಡಳಿಗಳಲ್ಲಿ ನಿರ್ದೇಶಕ ಹಾಗೂ ಸದಸ್ಯ ಸ್ಥಾನಗಳನ್ನು ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಪ್ರಕಟಗೊಂಡ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಿರ್ದೇಶಕ ಸ್ಥಾನದ ಅಭ್ಯರ್ಥಿಯಾಗಿ ಪ್ರಕಟಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಶಂಕರ್ ಎ. ಕುಂದರ್ ಅವರು, ತಮಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನೇ ನೀಡಬೇಕು. ಅದನ್ನು ಹೊರತುಪಡಿಸಿ ಯಾವುದೇ ನಿರ್ದೇಶಕ ಅಥವಾ ಸದಸ್ಯ ಸ್ಥಾನವನ್ನು ಸ್ವೀಕರಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಸಮಾನ ಮನಸ್ಕ ಸ್ನೇಹಿತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಬೆಂಬಲಿಗರು, ಮುಂದಿನ ಹಂತದಲ್ಲಿ ಪ್ರಕಟಗೊಳ್ಳಲಿರುವ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಶಂಕರ್ ಎ. ಕುಂದರ್ ಅವರ ಹೆಸರನ್ನು ಪ್ರಕಟಿಸಬೇಕು. ಇಲ್ಲವಾದಲ್ಲಿ ಅವರು ಮುಂದೆ ಕೈಗೊಳ್ಳುವ ಯಾವುದೇ ರಾಜಕೀಯ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷಕ್ಕಾಗಿ ಹಲವು ವರ್ಷಗಳಿಂದ ನಿಷ್ಠೆಯಿಂದ ದುಡಿದ ಹಿರಿಯ ಮುಖಂಡರಿಗೆ ಸೂಕ್ತ ಗೌರವ ಹಾಗೂ ಸ್ಥಾನಮಾನ ನೀಡಬೇಕು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂತು.
ಈ ಸಂದರ್ಭದಲ್ಲಿ ರಾಜ್ಯ ಮೀನುಗಾರರ ಸಮಿತಿಯ ಸದಸ್ಯರಾದ ರಮೇಶ್ ತಿಂಗಳಾಯ. ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಪೂಜಾರಿ ಪಾಂಡೇಶ್ವರ. ಕೋಟ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ರವೀಂದ್ರ ಕಾಮತ್. ಹಿರಿಯ ಮುಖಂಡರಾದ ಬಸವ ಪೂಜಾರಿ. ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸಿನ ಅಧ್ಯಕ್ಷರಾದ ಪಿ. ಶ್ರೀನಿವಾಸ ಅಮೀನ್, ಕೋಡಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಶಂಕರ ಬಂಗೇರ. ನಾಗೇಶ್ ತಿಂಗಳಾಯ ಕೋಡಿ ಬೆಂಗ್ರೆ. ರಮೇಶ್ ಕೋಟ್ಯಾನ್ ಕೋಡಿ ಬೆಂಗ್ರೆ, ಹಾಗೂ ಬೇರೆ ಬೇರೆ ಗ್ರಾಮ ಪಂಚಾಯಿತಿಯಿಂದ ಆಗಮಿಸಿದ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿ ಶಂಕರ್ ಎ ಕುಂದರ್ ಅವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಹಕ್ಕೋತ್ತಾಯ ಮಂಡಿಸಿದರು. ಗಣೇಶ್ ಕೆ ನೆಲ್ಲಿಬೆಟ್ಟು ಇವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.












Leave a Reply