ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಂಸ್ಕೃತಿ ಮಾನವ ಅಸ್ತಿತ್ವದ ಅಸ್ಮಿತೆ : ಶ್ರೀ ಸಚ್ಚಿದಾನಂದ ಚಾತ್ರ

ಕಲೆ ಮತ್ತು ಸಂಸ್ಕೃತಿ ಮಾನವನ ಭಾವನೆಗಳ ಅಭಿವ್ಯಕ್ತಿ. ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ ಯಾವುದಾದರೂ ಒಂದು ಕಲೆಯ ಭಾವನೆ ಅಡಗಿರುತ್ತದೆ. ಆದರೆ ವ್ಯಕ್ತಿಯಾದವರು ತಮ್ಮ ಪ್ರತಿಭೆಯಿಂದ ಅದನ್ನು ಪ್ರದರ್ಶಿಸಬೇಕಾಗುತ್ತದೆ. ಹೀಗೆ ಪ್ರದರ್ಶಿತವಾದ ಕಲೆ ಅನನ್ಯ ಶಕ್ತಿಯಾಗಿದ್ದು, ವ್ಯಕ್ತಿಯ ಪ್ರತಿಭೆಗೆ ಸೂಕ್ತ ವೇದಿಕೆ ದೊರೆತಾಗ ಅದು ಆತ್ಮವಿಶ್ವಾಸವಾಗಿ, ಸಾಧನೆಯಾಗಿ ರೂಪಗೊಳ್ಳುತ್ತದೆ ಎಂದು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಸಚ್ಚಿದಾನಂದ ಚಾತ್ರ ಹೇಳಿದರು.

ವಿದ್ಯಾರ್ಥಿಗಳ ಜೀವನವನ್ನು ಬದಲಾವಣೆ ಮಾಡುವ ಅದ್ಭುತ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗಿದೆ. ಆದರೆ ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅತ್ಯಂತ ಜವಾಬ್ದಾರಿಯಿಂದ ಯಾವುದೇ ದುಷ್ಚಟಗಳಿಗೆ ಒಳಗಾಗದೆ ಉತ್ತಮ ರೀತಿಯ ಶಿಕ್ಷಣ ಪಡೆದು ಸಮಾಜ ಸೇವೆ ಮಾಡಬೇಕು. ನಮ್ಮ ಕಮಲಶಿಲೆ ದೇವಸ್ಥಾನದ ವತಿಯಿಂದ ಹಲವಾರು ಬಗೆಯ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇವೆ. ಇದು ಸ್ಥಳೀಯರ ಸಹಕಾರದಿಂದ ಸಾಧ್ಯವಾಗಿದ್ದು ವಿದ್ಯಾರ್ಥಿಗಳು ಇಂತಹ ಸಹಕಾರ ಮತ್ತು ಸೇವಾ ಮನೋಭಾವ ಬೆಳೆಸಿಕೊಂಡು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿನ ಕಲಾವಿಭಾಗ ಸಾದರಪಡಿಸಿದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆ “ಉನ್ಮೇಷ-೨೦೨೬” ಸಂಸ್ಕೃತಿಗಳ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ವಿದ್ಯಾರ್ಥಿಗಳಿಗೆ ಅಧ್ಯಯನದ ದಿನಗಳು ಅಮೂಲ್ಯವಾದವು.

ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ ತಮ್ಮ ಬದುಕಿನ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬೇಕು. “ವಿದ್ಯಾ ಧನಂ ಸರ್ವಧನಂ ಪ್ರಧಾನಂ ” ವಿದ್ಯೆ ಎಂಬ ಸಂಪತ್ತು ಎಲ್ಲಾ ಸಂಪತ್ತುಗಳಿಗಿಂತಲೂ ಶ್ರೇಷ್ಠವಾದದ್ದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರದ ಗೀತಾ ಎಚ್.ಎಸ್.ಎನ್ ಫೌಂಡೇಶನ್ ಸ್ಥಾಪಕ ಶ್ರೀ ಶಂಕರ್ ಐತಾಳ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಪ್ರಕಾಶ್ ಶೆಟ್ಟಿ ಗೈನಾಡಿ, ಶಂಕರನಾರಾಯಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಜಗದೀಶ್ ಭಟ್, ಹೊಸಂಗಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ರಣಜಿತ್ ಕುಮಾರ್ ಶೆಟ್ಟಿ ಹಾಗೂ ಸಮಾರೋಪ ಸಮಾರಂಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಕೆ. ಗೋಪಾಲ ಪೂಜಾರಿ, ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ವಲಯದ ಜಂಟಿ ನಿರ್ದೇಶಕರಾದ ಡಾ. ಕವಿತಾ ಕೆ ಆರ್, ಬಿದ್ಕಲ್ ಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜಶಾಸ್ತ್ರ ಉಪನ್ಯಾಸಕ ಶ್ರೀ ರಾಘವೇಂದ್ರ ಕಿಣಿ, ಸಿದ್ದಾಪುರ ಬುಕ್ ಹೌಸ್ ನ ಮಾಲೀಕರಾದ ಶ್ರೀ ಅಶ್ವಿತ್ ಶೆಟ್ಟಿ ಕೊಡ್ಲಾಡಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದಿವ್ಯಾ ಎಂ ಎಸ್, ಐಕ್ಯೂಎಸಿ ಸಂಚಾಲಕರಾದ ಡಾ. ನಳಿನಶ್ರೀ ಆರ್. ಎನ್., ಉಪಸ್ಥಿತರಿದ್ದರು. ಕು. ನಾಗರತ್ನ ಮತ್ತು ತಂಡ ಪ್ರಾರ್ಥಿಸಿದರು, ಡಾ. ನಳಿನಶ್ರೀ ಸ್ವಾಗತಿಸಿದರು, ಶ್ರೀ. ಪಾಂಡುರಂಗ ನಿರೂಪಿಸಿದರು, ಡಾ. ಗಂಗಾಧರ ವಂದಿಸಿದರು.

Leave a Reply

Your email address will not be published. Required fields are marked *